ಜು.31ರಂದು ಹಜ್ ಯಾತ್ರಿಗಳ ವಿಮಾನಯಾನ ಉದ್ಘಾಟನೆ: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜು.30: ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸುವ ಹಜ್‌ಯಾತ್ರಿಗಳ ವಿಮಾನಯಾನ ಉದ್ಘಾಟನಾ ಸಮಾರಂಭವನ್ನು ಜು.31ರಂದು ಸಂಜೆ 7 ಗಂಟೆಗೆ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಹಜ್‌ಯಾತ್ರಿಗಳ ವಿಮಾನಯಾನದ ಸಮಾರಂಭವನ್ನು ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಇನ್ನಿತರ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.
10 ಸಾವಿರ ಮಂದಿಗೆ ಊಟದ ವ್ಯವಸ್ಥೆ : ಯಾತ್ರಿಗಳನ್ನು ಬೀಳ್ಕೊಡಲು ಅವರೊಂದಿಗೆ ಕುಟುಂಬ ಸದಸ್ಯರು, ಬಂಧುಗಳು ಬಂದಿರುತ್ತಾರೆ. ಆದರೆ, ಕಳೆದ ಬಾರಿ ಅವರಿಗೆ ಹಜ್ ಭವನದ ಬಳಿ ಊಟೋಪಚಾರದ ಸೌಲಭ್ಯಗಳು ಸಿಗದೆ ಪರದಾಡಿದ ವಿಷಯ ತನ್ನ ಗಮನಕ್ಕೆ ಬಂದಿದೆ. ಆದುದರಿಂದ, ಈ ಬಾರಿ ಹಜ್ ಭವನದ ಬಳಿ ಪ್ರತಿದಿನ ಸುಮಾರು 10 ಸಾವಿರ ಮಂದಿಗೆ ಮೂರು ಹೊತ್ತು ಊಟದ ವ್ಯವಸ್ಥೆಯನ್ನು ವೈಯಕ್ತಿಕವಾಗಿ ಏರ್ಪಡಿಸಿದ್ದೇನೆ ಎಂದು ಅವರು ಹೇಳಿದರು.
ಶಿವಾಜಿನಗರದ ಸುಲ್ತಾನ್ ಶಾ ಮಸೀದಿಯ ಜಮಾತ್ ಮುಖ್ಯಸ್ಥರೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಊಟೋಪಚಾರವನ್ನು ಯಾವ ರೀತಿ ನಡೆಸಬೇಕು ಎಂಬುದರ ಕುರಿತು ಅವರು ವ್ಯವಸ್ಥೆಯನ್ನು ಮಾಡಲಿದ್ದಾರೆ. ಅಲ್ಲದೆ, ಹಜ್ ಭವನದ ಪಕ್ಕದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ಅವರಿಗೆ ಸೇರಿರುವ ಖಾಲಿ ಜಾಗದಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ತಾತ್ಕಾಲಿಕ ಮಸೀದಿಗಳು ಹಾಗೂ ಅವರು ಉಳಿದುಕೊಳ್ಳಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಹಜ್‌ಯಾತ್ರಿಗಳಿಗೆ ಕಳೆದ ಬಾರಿಯಂತೆ ಈ ಬಾರಿಯೂ ವಿಮಾನ ನಿಲ್ದಾಣದಲ್ಲಿಯೇ ಎಮಿಗ್ರೇಷನ್ ವ್ಯವಸ್ಥೆ ಏರ್ಪಡಿಸಲಾಗಿದೆ. ಪ್ರತಿ 20 ಸೆಕೆಂಡಿಗೆ ಒಬ್ಬ ಯಾತ್ರಿಯ ಎಮಿಗ್ರೇಷನ್ ಆಗುತ್ತಿದೆ. ಹಜ್ ಭವನಕ್ಕಿಂತ ವಿಮಾನ ನಿಲ್ದಾಣದಲ್ಲಿಯೇ ಈ ವ್ಯವಸ್ಥೆ ಉತ್ತಮವಾಗಿದೆ ಎಂದು ಅವರು ಹೇಳಿದರು.
ಕೆ.ಸಿ.ವೇಣುಗೋಪಾಲ್ ಕ್ಷೇತ್ರಕ್ಕೆ ನೆರವು: ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಕೇರಳ ರಾಜ್ಯದ ಕೆಲವು ಪ್ರದೇಶಗಳಿಗೆ ನೆರವು ನೀಡುವಂತೆ ಕೋರಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕರೆ ಮಾಡಿ ಮನವಿ ಮಾಡಿದ್ದರು. ಅದರಂತೆ, ವೈಯಕ್ತಿಕವಾಗಿ 50 ಸಾವಿರ ಕೆಜಿ ಅಕ್ಕಿ, 10 ಸಾವಿರ ಕೆಜಿ ಸಕ್ಕರೆ ಹಾಗೂ 50 ಸಾವಿರ ಮಂದಿಗೆ ಉಪಯೋಗವಾಗುವಂತೆ ಸಿದ್ಧಪಡಿಸಿದ ಸಾಂಬಾರ್ ಪುಡಿಯನ್ನು ಕಳುಹಿಸಲಾಗಿದ್ದು, ಅದನ್ನು ಜಿಲ್ಲಾಧಿಕಾರಿ ಪಡೆದು, ಅಲ್ಲಿನ ಸರಕಾರದ ವತಿಯಿಂದ ಅಭಿನಂದನೆಯನ್ನು ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.
ತಾನು ಪ್ರತಿನಿಧಿಸುವ ಅಲಪ್ಪುಝ ಲೋಕಸಭಾ ಕ್ಷೇತ್ರದಲ್ಲಿಯೂ ಹೆಚ್ಚಿನ ಹಾನಿ ಉಂಟಾಗಿದ್ದು, ಈ ಭಾಗಕ್ಕೂ ನೆರವು ನೀಡುವಂತೆ ವೇಣುಗೋಪಾಲ್ ಮತ್ತೊಮ್ಮೆ ಮನವಿ ಮಾಡಿದರು. ಅದರಂತೆ, ಇಂದು ಪುನಃ 50 ಸಾವಿರ ಕೆಜಿ ಅಕ್ಕಿ, 10 ಸಾವಿರ ಕೆಜಿ ಸಕ್ಕರೆ ಹಾಗೂ 50 ಸಾವಿರ ಮಂದಿಗೆ ಉಪಯೋಗವಾಗುವಂತೆ ಸಿದ್ಧಪಡಿಸಿದ ಸಾಂಬಾರ್ ಪುಡಿಯನ್ನು ಕಳುಹಿಸುತ್ತಿದ್ದೇನೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಮಂಗಳೂರು ಹಾಗೂ ಗುಲ್ಬರ್ಗದಲ್ಲಿ ಹಜ್ ಭವನ ನಿರ್ಮಿಸಲು ಸರಕಾರದ ಅನುಮತಿ ಸಿಕ್ಕಿದೆ. ಗುಲ್ಬರ್ಗದಲ್ಲಿ ಈಗಾಗಲೆ ಕಾಮಗಾರಿ ಪ್ರಾರಂಭವಾಗಿದೆ. ಮಂಗಳೂರಿನಲ್ಲಿ ಈ ಹಿಂದೆ ವಿಮಾನ ನಿಲ್ದಾಣದ ಬಳಿ ಗುರುತಿಸಲಾಗಿದ್ದ ಜಾಗ ಸೂಕ್ತವಾಗಿರದ ಹಿನ್ನೆಲೆಯಲ್ಲಿ, ನಗರದ ಪ್ರದೇಶದಲ್ಲಿ ಸ್ಥಳವನ್ನು ಗುರುತಿಸಲಾಗಿದೆ. ಶೀಘ್ರವೇ ಮಂಗಳೂರಿನಲ್ಲಿಯೂ ಹಜ್ ಭವನ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.