ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬೆಟ್ಟೇಗೌಡ ಪದಚ್ಯುತಿ

Update: 2018-07-30 15:49 GMT

ಬೆಂಗಳೂರು, ಜು. 30: ರಾಜ್ಯ ಒಕ್ಕಲಿಗ ಸಂಘದ 19 ಮಂದಿ ನಿರ್ದೇಶಕರು ಅವಿಶ್ವಾಸ ನಿರ್ಣಯ ಮಂಡಿಸಿದ ಹಿನ್ನೆಲೆಯಲ್ಲಿ ಸಂಘ ಅಧ್ಯಕ್ಷ ಬೆಟ್ಟೇಗೌಡ ಅವರನ್ನು ಸಂಘದಿಂದ ಪದಚ್ಯುತಿಗೊಳಿಸಲಾಗಿದೆ.

ಸೋಮವಾರ ಇಲ್ಲಿನ ಚಾಮರಾಜಪೇಟೆಯಲ್ಲಿರುವ ರಾಜ್ಯ ಒಕ್ಕಲಿಗ ಸಂಘದಲ್ಲಿ ನಡೆದ ಸಭೆಯಲ್ಲಿ ನಿರ್ದೇಶಕರು, ಪದಾಧಿಕಾರಿಗಳು ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜು.18ರಂದು ಅವಿಶ್ವಾಸ ನಿರ್ಣಯ ಪತ್ರಕ್ಕೆ ಸಂಘದ ನಿರ್ದೇಶಕರು ಸಹಿ ಹಾಕಿದ್ದರು.

ಒಕ್ಕಲಿಗ ಸಂಘಕ್ಕೆ 35 ಮಂದಿ ನಿರ್ದೇಶಕರಿದ್ದು, ಏಳು ದಿನಗಳೊಳಗೆ ವಿಶ್ವಾಸಮತ ಸಾಬೀತುಪಡಿಸಲು ವಿರೋಧಿ ಬಣ ಪಟ್ಟು ಹಿಡಿದಿತ್ತು. ಹೀಗಾಗಿ ಇಂದು ವಿಶ್ವಾತಮತ ಸಾಬೀತು ಪಡಿಸುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಬೆಟ್ಟೇಗೌಡ ಅವರನ್ನು ಪದಚ್ಯುತಿಗೊಳಿಸಲಾಗಿದೆ.

ಹಿಂದಿನ ಅಧ್ಯಕ್ಷರಾಗಿದ್ದ ಡಾ.ಅಪ್ಪಾಜಿಗೌಡ ಅವರನ್ನು 2017ರಲ್ಲಿ ಹುದ್ದೆಯಿಂದ ಪದಚ್ಯುತಗೊಳಿಸಿ ನಿರ್ಣಯ ಕೈಗೊಂಡ ಪರಿಣಾಮ ಬೆಟ್ಟೇಗೌಡ, ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಇದೀಗ ಬೆಟ್ಟೇಗೌಡ ಪದಚ್ಯುತಿಗೊಳ್ಳುವುದರೊಂದಿಗೆ ಒಂದುವರೆ ವರ್ಷದ ಅವರ ಆಡಳಿತ ಅಂತ್ಯಗೊಂಡಿದೆ.

ಆಗಸ್ಟ್ 7ರಂದು ರಾಜ್ಯ ಒಕ್ಕಲಿಗರ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು, ಹಂಗಾಮಿ ಕಾರ್ಯಾಧ್ಯಕ್ಷರಾಗಿ ನಾರಾಯಣ ಮೂರ್ತಿ ಅವರನ್ನು ನೇಮಕಗೊಂಡಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News