×
Ad

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ: ಅಧಿಸೂಚನೆ ರದ್ದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

Update: 2018-07-30 21:27 IST

ಬೆಂಗಳೂರು, ಜು.30: ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹೊರಡಿಸಲಾಗಿರುವ ಅಧಿಸೂಚನೆ ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಈ ಕುರಿಂತೆ ಮೈಸೂರಿನ ಕುಂಬಾರಕೊಪ್ಪಲು ನಿವಾಸಿ ಶಿವಮಾದು ಮತ್ತು ತುಮಕೂರಿನ ಬಿ.ಎಸ್.ನಾಗೇಶ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಕ್ಷೇತ್ರ ಪುನರ್ ವಿಂಗಡಣೆಯು ಜನಸಂಖ್ಯೆ ಮತ್ತು ಭೌಗೋಳಿಕ ಪ್ರಮಾಣಕ್ಕೆ ಅನುಗುಣವಾಗಿ ಇಲ್ಲ. ಇವೆಲ್ಲಾ ಯಾರೊ ಕೆಲವರ ಹಿತಾಸಕ್ತಿ ಮತ್ತು ಗೆಲುವಿನ ಅನುಕೂಲಕ್ಕೆ ಮಾಡಿಕೊಂಡಂತೆ ಇವೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಮೈಸೂರು ಪಾಲಿಕೆಯಲ್ಲಿ 65 ವಾರ್ಡ್‌ಗಳಿವೆ. 9 ಲಕ್ಷ 90 ಸಾವಿರ ಜನಸಂಖ್ಯೆ ಇದೆ. ಈ ಜನಸಂಖ್ಯೆಯನ್ನು 65 ವಾರ್ಡುಗಳಿಗೆ ಸಮ ಪ್ರಮಾಣದಲ್ಲಿ ಹಂಚಿಕೆ ಮಾಡಿ ವಿಂಗಡಣೆ ಮಾಡಿಲ್ಲ. ಬದಲಿಗೆ, ಒಂದು ವಾರ್ಡ್‌ನಲ್ಲಿ 10 ಸಾವಿರ ಜನಸಂಖ್ಯೆ ಇದ್ದರೆ ಮತ್ತೊಂದು ವಾರ್ಡ್‌ನಲ್ಲಿ 25 ಸಾವಿರ ಜನಸಂಖ್ಯೆ ಇದೆ. ಹೊಸ ಲೇಔಟ್‌ಗಳನ್ನೂ ಸೇರ್ಪಡೆ ಮಾಡಿಲ್ಲ ಎಂದೂ ದೂರಲಾಗಿದೆ.

ಚುನಾವಣಾ ಆಯೋಗವು ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ 2018ರ ಮಾರ್ಚ್ 27ರಂದು ಅಧಿಸೂಚನೆ ಹೊರಡಿಸಿದೆ. ಅಂದು ರಾಜ್ಯ ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿತ್ತು. ಅಧಿಸೂಚನೆಗೆ ನಮ್ಮ ಆಕ್ಷೇಪಣೆ ಆಲಿಸಲು ಅವಕಾಶವನ್ನೇ ನೀಡಿಲ್ಲ. ಹೀಗಾಗಿ ಈ ಅಧಿಸೂಚನೆ ಕರ್ನಾಟಕ ಪೌರಾಡಳಿತ ಕಾಯ್ದೆ1976ರ ಕಲಂ 7 ಮತ್ತು 21ಕ್ಕೆ ವಿರುದ್ಧವಾಗಿದ್ದು ಇದನ್ನು ರದ್ದುಗೊಳಿಸಬೇಕು ಎಂದೂ ಅರ್ಜಿದಾರರು ಕೋರಿದ್ದಾರೆ.

ಮೈಸೂರು ಅರ್ಜಿದಾರರ ಪರ ಎ.ವಿ.ನಿಶಾಂತ್, ತುಮಕೂರು ಅರ್ಜಿದಾರರ ಪರ ವರುಣ್ ಜೆ ಪಾಟೀಲ್ ವಕಾಲತ್ತು ವಹಿಸಿದ್ದಾರೆ. ಹಿರಿಯ ವಕೀಲರಾದ ಡಿ.ಎನ್.ನಂಜುಂಡ ರೆಡ್ಡಿ ಹಾಗೂ ಜಯಕುಮಾರ್ ಎಸ್.ಪಾಟೀಲ್ ವಾದ ಮಂಡಿಸಿದರು. ವಿಚಾರಣೆಯನ್ನು ಇದೇ 31ಕ್ಕೆ ಮುಂದೂಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News