ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ: ಅರ್ಜಿಯ ಮನವಿ ಮೇಲೆ ವಿಚಾರಣೆ ನಡೆಸಲು ಹೈಕೋರ್ಟ್ ತೀರ್ಮಾನ

Update: 2018-07-31 16:09 GMT

ಬೆಂಗಳೂರು, ಜು.31: ಸಾಫ್ಟ್‌ವೇರ್ ಇಂಜಿನಿಯರ್ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಅಜಿತಾಬ್ ತಂದೆ ಸಲ್ಲಿಸಿರುವ ಅರ್ಜಿಯಲ್ಲಿನ ಮನವಿಯ ಮೇಲೆ ವಿಚಾರಣೆ ನಡೆಸಲು ಹೈಕೋರ್ಟ್ ತೀರ್ಮಾನಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ತಕರಾರು ಅರ್ಜಿ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತು. ಈ ವೇಳೆ ಸರಕಾರಿ ವಕೀಲರು, ಪ್ರಕರಣಕ್ಕೆ ಸಂಬಂಧಿಸಿದ ಸಿಐಡಿ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಪೀಠಕ್ಕೆ ಸಲ್ಲಿಸಿದರು. ವರದಿ ಗಮನಿಸಿದ ನ್ಯಾಯಮೂರ್ತಿಗಳು ತನಿಖಾ ಪ್ರಗತಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿತು.

ಈ ವೇಳೆ ಅರ್ಜಿದಾರರ ಪರ ವಕೀಲರು, ಅಜಿತಾಬ್ ನಾಪತ್ತೆಯಾಗಿ 8 ತಿಂಗಳು ಕಳೆದಿವೆ. ಪೊಲೀಸರ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನ್ಯಾಯಪೀಠಕ್ಕೆ ಮತ್ತೊಮ್ಮೆ ಮನವಿ ಮಾಡಿದರು.

ಇದಕ್ಕೆ ನ್ಯಾಯಪೀಠ, ಅರ್ಜಿದಾರರ ಮನವಿಯಲ್ಲಿರುವ ಅಂಶಗಳ ಕುರಿತು ವಿಚಾರಣೆ ನಡಸುವುದಾಗಿ ತಿಳಿಸಿ, ಮೆರಿಟ್ ಆಧಾರದಲ್ಲಿ ವಾದ ಮಂಡಿಸಲು ಸರಕಾರಿ ವಕೀಲರಿಗೆ ಸೂಚಿಸಿತು. ವಾದ ಮಂಡನೆಗೆ ಸರಕಾರಿ ವಕೀಲರು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿ ವಿಚಾರಣೆಯನ್ನು ಆ.2ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News