ಬಿಹಾರ ಮೂಲದ ಬಾಲಕಿಯನ್ನು ಹೆತ್ತವರ ಸುಪರ್ದಿಗೆ ನೀಡಿದ ಹೈಕೋರ್ಟ್
ಬೆಂಗಳೂರು, ಜು.31: ಹುಳಿಮಾವು ಠಾಣಾ ವ್ಯಾಪ್ತಿಯ ವೈದ್ಯರೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡು ಶಿಕ್ಷಣ ಪಡೆಯುತ್ತಿದ್ದಳು ಎನ್ನಲಾದ ಬಿಹಾರ ಮೂಲದ ಅಪ್ರಾಪ್ತಳನ್ನು ಹೆತ್ತವರ ಸುಪರ್ದಿಗೆ ನೀಡಿದ ಹೈಕೋರ್ಟ್, ಪೋಷಕರು ಬಾಲಕಿ ಬಿಹಾರಕ್ಕೆ ಕರೆದೊಯ್ಯಬೇಕು, ಅಲ್ಲಿನ ಗಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಾಲಕಿ ಹೆತ್ತವರೊಂದಿಗೆ ನೆಲೆಸಿರುವ ಬಗ್ಗೆ ಪ್ರತಿ ತಿಂಗಳು ಪರಿಶೀಲನೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸುವ ಮೂಲಕ ಅಪರೂಪದ ಆದೇಶ ಹೊರಡಿಸಿದೆ.
ದೊಡ್ಡಕಮ್ಮನಹಳ್ಳಿಯ ವೈದ್ಯ ಪವನ್ ಗೌತಮ್ ಮನೆಯಲ್ಲಿರಿಸಿದ್ದ ತಮ್ಮ ಹನ್ನೊಂದು ವರ್ಷದ ಮಗಳನ್ನು ಪೊಲೀಸರು ಕರೆದೊಯ್ದು ಸರಕಾರಿ ಬಾಲಕಿಯರ ಮಂದಿರದಲ್ಲಿಟ್ಟಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ ಸಹ ಮಗಳನ್ನು ತಮ್ಮ ಸುಪರ್ದಿಗೆ ನೀಡಲು ನಿರಾಕರಿಸಿದೆ ಎಂದು ಆರೋಪಿಸಿ ತಂದೆ ಮೋಹನ್ ಚೌದರಿ, ಆತನ ಪತ್ನಿ ಮತ್ತು ವೈದ್ಯ ಪವನ್ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.
ಪೊಲೀಸರು ಮಂಗಳವಾರ ಬಾಲಕಿಯನ್ನು ಹೈಕೋರ್ಟ್‌ಗೆ ಹಾಜರುಪಡಿಸಿದ್ದರು. ಬಾಲಕಿ ಸಹ ಹೆತ್ತವರೊಂದಿಗೆ ಬಿಹಾರಕ್ಕೆ ತೆರಳುವುದಾಗಿ ನ್ಯಾಯಪೀಠಕ್ಕೆ ತಿಳಿಸಿದರು. ಇದನ್ನು ಪರಿಗಣಿಸಿದ ನ್ಯಾಯಮೂರ್ತಿ ರಾಘವೇಂದ್ರ ಚೌವ್ಹಾಣ್ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಮಕ್ಕಳ ಕಲ್ಯಾಣ ಸಮಿತಿಯು ಕೂಡಲೇ ಬಾಲಕಿಯನ್ನು ಹೆತ್ತವರ ಸುಪರ್ದಿಗೆ ನೀಡಬೇಕು. ಹೆತ್ತವರು ಬಾಲಕಿಯನ್ನು ಬಿಹಾರಕ್ಕೆ ಕರೆದೊಯ್ಯಬೇಕು. ಅಲ್ಲಿಗೆ ತೆರಳಿದ ನಂತರ ಬಾಲಕಿಯನ್ನು ಮತ್ತೆ ಬೆಂಗಳೂರಿಗೆ ಕರೆತರುವ ಸಾಧ್ಯತೆಯಿದೆ. ಹೀಗಾಗಿ, ಬಾಲಕಿ ತನ್ನ ತಂದೆ ತಾಯಿಯೊಂದಿಗೆ ನೆಲೆಸಿರುವ ಬಗ್ಗೆ ಬಿಹಾರದ ಗಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರತಿ ತಿಂಗಳು ಪರಿಶೀಲನೆ ನಡೆಸಿ, ಹೈಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಆದೇಶಿಸಿತು.
ಬಿಹಾರದ ಮೋಹನ್ ಚೌದರಿಯು, ತಮ್ಮ ಅಪ್ರಾಪ್ತ ಪುತ್ರಿಯನ್ನು ನಗರದ ದೊಡ್ಡಕಮ್ಮನಹಳ್ಳಿಯಲ್ಲಿ ನೆಲೆಸಿರುವ ದೂರದ ಸಂಬಂಧಿ ಪವನ್ ಗೌತಮ್ ಮನೆಯಲ್ಲಿರಿಸಿದ್ದರು. ಪವನ್ ಬಾಲಕಿಗೆ ಶಿಕ್ಷಣ ಕೊಡಿಸುತ್ತಿದ್ದರು ಎನ್ನಲಾಗಿದೆ. ಆದರೆ, ಮಕ್ಕಳ ಸಹಾಯವಾಣಿ ನೀಡಿದ್ದ ಮಾಹಿತಿ ಮೇರೆಗೆ ಹುಳಿಮಾವು ಠಾಣೆಗೆ ದೂರು ನೀಡಿದ್ದ ಕಾರ್ಮಿಕ ಇಲಾಖೆ ಅಧಿಕಾರಿಗಳು, ಬಾಲಕಿಯು ಪವನ್ ಮನೆಯಲ್ಲಿ ಬಾಲ ಕಾರ್ಮಿಕಳಂತೆ ದುಡಿಯುತ್ತಿದ್ದಾಳೆ ಎಂದು ದೂರಿದ್ದರು. ಇದರಿಂದ ಪೊಲೀಸರು ಜುಲೈ 7ರಂದು ಬಾಲಕಿಯನ್ನು ಕರೆದೊಯ್ದು ಸರಕಾರಿ ಬಾಲಕಿಯರ ಮಂದಿರದಲ್ಲಿ ಇರಿಸಿದ್ದರು.