ಬೆಂಗಳೂರು: ಉ.ಕ ಪ್ರತ್ಯೇಕ ರಾಜ್ಯದ ಕೂಗು ವಿರೋಧಿಸಿ ಪ್ರತಿಭಟನೆ

Update: 2018-07-31 16:43 GMT

ಬೆಂಗಳೂರು, ಜು.31: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ವಿರೋಧಿಸಿ ಕನ್ನಡ ಪರ ಹೋರಾಟಗಾರರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಮಂಗಳವಾರ ನಗರದ ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೂ ಪ್ರತಿಭಟನೆ ನಡೆಸಿದ ಹೋರಾಟಗಾರರು, ಅಖಂಡ ಕರ್ನಾಟಕ ಒಂದೇ ಎಂಬ ಘೋಷವಾಕ್ಯದಡಿ ಚಿನ್ನದ ರಥದಲ್ಲಿ ರಾಜ್ಯದ ಭೂಪಟ ಹಾಗೂ ಕನ್ನಡ ತಾಯಿ ಭುವನೇಶ್ವರಿ ಚಿತ್ರಪಟವನ್ನಿಟ್ಟು ಮೆರವಣಿಗೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಹೋರಾಟಗಾರ ವಾಟಾಳ್ ನಾಗರಾಜ್, ಅನೇಕ ಮಹನೀಯರ ತ್ಯಾಗದ ಫಲವಾಗಿ ಕರ್ನಾಟಕ ಏಕೀಕರಣವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಡೆಯಬಾರದು. ಉತ್ತರ ಕರ್ನಾಟಕ-ಹೈದರಾಬಾದ್ ಕರ್ನಾಟಕದ ಅಭಿವೃದ್ಧಿಗೆ 100ಕ್ಕೆ 100ರಷ್ಟು ನಮ್ಮ ಹೋರಾಟ ಇದ್ದೇ ಇರುತ್ತದೆ ಎಂದು ಹೇಳಿದರು.

ಪ್ರತ್ಯೇಕ ಕರ್ನಾಟಕಕ್ಕೆ ನಾವು ಬೆಂಬಲ ನೀಡುವುದಿಲ್ಲ. ತಕ್ಷಣ ತುರ್ತು ಶಾಸನಸಭೆ ಕರೆದು 1956 ರಿಂದ ಇಲ್ಲಿಯವರೆಗಿನ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರವನ್ನು ಮಂಡಿಸಬೇಕು. ಜೊತೆಗೆ ಶಾಸನಸಭೆಯಲ್ಲಿ ಡಾ.ನಂಜುಂಡಪ್ಪ ವರದಿ ಬಗ್ಗೆ ಚರ್ಚೆ ಮಾಡಬೇಕು ಎಂದು ವಾಟಾಳ್ ಒತ್ತಾಯ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News