ಸಮ್ಮಿಶ್ರ ಸರಕಾರದ ವಿರುದ್ಧ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ದಿನೇಶ್‌ ಗುಂಡೂರಾವ್

Update: 2018-08-01 12:45 GMT

ಬೆಂಗಳೂರು, ಆ.1: ಸಮ್ಮಿಶ್ರ ಸರಕಾರಕ್ಕೆ ಶಕ್ತಿ ತುಂಬುವುದು ಕಾಂಗ್ರೆಸ್‌ನ ಶಾಸಕರು ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಕರ್ತವ್ಯವಾಗಿದ್ದು, ಬಹಿರಂಗವಾಗಿ ಅಪಸ್ವರ ಎತ್ತುವವರ ಮೇಲೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್ ತಿಳಿಸಿದರು.

ಬುಧವಾರ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಗರದ ಕೆಇಬಿ ಇಂಜಿನಿಯರ್ಸ್‌ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸ್ಫೂರ್ತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸೇರಿದಂತೆ ಪಕ್ಷದ ಮುಖಂಡರು ಭವಿಷ್ಯದ ಹಿತದೃಷ್ಟಿಯಿಂದ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಹೈಕಮಾಂಡ್‌ನ ಸೂಚನೆಯನ್ನು ಪಕ್ಷದ ಎಲ್ಲ ಸ್ಥರದ ನಾಯಕರು ಪಾಲಿಸಬೇಕು. ಇದರಿಂದ ಪಕ್ಷವು ಭವಿಷ್ಯದಲ್ಲಿ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರ ರಚನೆಗೊಂಡು ಹೆಚ್ಚು ಸಮಯವಾಗಿಲ್ಲ. ಆಗಲೇ ಸರಕಾರ ವಿರುದ್ಧ ಅಪಸ್ವರ ಎತ್ತಿದರೆ ಸುಸೂತ್ರವಾಗಿ ಅಧಿಕಾರ ನಡೆಸಲು ಕಷ್ಟವಾಗಲಿದೆ. ಹೀಗಾಗಿ ಪಕ್ಷದ ನಾಯಕರು ಸಮ್ಮಿಶ್ರ ಸರಕಾರದ ಜತೆಗಿರಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಜನಪರ ಯೋಜನೆಗಳನ್ನು ರೂಪಿಸಲು ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದರು.

ಬೂತ್‌ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ‘ಶಕ್ತಿ’ಯೆಂಬ ಹೊಸ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ. ರಾಜ್ಯದಲ್ಲಿ ಯಾವುದೆ ಮೂಲೆಯಲ್ಲಿರುವ ಹಳ್ಳಿಯಲ್ಲಿರುವ ಬೂತ್ ಮಟ್ಟದ ಕಾರ್ಯಕರ್ತನೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಕೆಪಿಸಿಸಿ ಅಧ್ಯಕ್ಷನಾಗಿ ನಾನು ಸಂಪರ್ಕದಲಿದ್ದು, ಸ್ಥಳೀಯ ಮಟ್ಟದ ಪಕ್ಷದ ಅಧಿಕಾರವನ್ನು ಪ್ರಾಮಾಣಿಕರಿಗೆ ನೀಡಲಾಗುವುದು ಎಂದು ಅವರು ಹೇಳಿದರು.

ಪರಿಷತ್ ಸದಸ್ಯ ರಿಝ್ವನ್ ಹರ್ಷದ್ ಮಾತನಾಡಿ, ಕೆಪಿಸಿಸಿ ಅಧ್ಯಕ್ಷರಾಗಿ ದಿನೇಶ್‌ ಗುಂಡೂರಾವ್ ಆಯ್ಕೆಯಾಗಿರುವುದು ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆ ಹಾಗೂ ಕಾಂಗ್ರೆಸ್ ಯುವಕ ಸಂಘಟನೆಯ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಸಂತಸ ತಂದಿದೆ. ದಿನೇಶ್‌ ಗುಂಡೂರಾವ್ ನೇತೃತ್ವದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆನೇಕಲ್ ಕ್ಷೇತ್ರದ ಶಾಸಕ ಶಿವಣ್ಣ, ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್, ಎಐಸಿಸಿ ಕಾರ್ಯದರ್ಶಿ ಸಲೀಂ ಅಹ್ಮದ್, ಕಾಂಗ್ರೆಸ್ ಮುಖಂಡರಾದ ವಿ.ಎಸ್.ಆರಾಧ್ಯ, ಕೆಂಚೇಗೌಡ, ಅಬ್ದುಲ್ ವಜೀದ್, ಸ್ವರೂಪ್‌ ಕುಮಾರ್, ಎಸ್.ಮನೋಹರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಈ ಹಿಂದಿನ ಯಾವ ಸರಕಾರವು ನೀಡದ ಜನಪರ ಯೋಜನೆಗಳನ್ನು ಜಾರಿಗೆ ತಂದಿತು. ಆದರೂ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇವೆ. ಕೇವಲ ಜನಪರ ಕಾರ್ಯಕ್ರಮಗಳನ್ನು ಜಾರಿ ಮಾಡಿದ ತಕ್ಷಣ ನಾವು ಗೆಲ್ಲುವುದಿಲ್ಲ. ಬಿಜೆಪಿಯ ಸುಳ್ಳು ಪ್ರಚಾರವು ನಮ್ಮ ಜನಪರ ಕಾರ್ಯಕ್ರಮಗಳನ್ನು ಮರೆಮಾಚಿದವು. ಹೀಗಾಗಿ ಕಾಂಗ್ರೆಸ್‌ನ ಬೂತ್ ಮಟ್ಟದ ಕಾರ್ಯಕರ್ತರು ಬಿಜೆಪಿ ಸುಳ್ಳು ಪ್ರಚಾರವನ್ನು ಸಮರ್ಥವಾಗಿ ಜನತೆಗೆ ಮುಟ್ಟಿಸುವಂತಹ ಅರಿವನ್ನು ಪಡೆದುಕೊಳ್ಳಬೇಕು.
-ದಿನೇಶ್‌ ಗುಂಡೂರಾವ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News