‘ಮಳೆ ಹಾನಿ’ ಪರಿಹಾರ ಘೋಷಿಸಲು ಒತ್ತಾಯಿಸಿ ಶಾಸಕರ ಧರಣಿ

Update: 2018-08-01 13:17 GMT

ಬೆಂಗಳೂರು, ಆ. 1: ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅತಿವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿದೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಪರಿಹಾರ ಪ್ರಕಟಿಸಬೇಕೆಂದು ಜಿಲ್ಲೆ ಶಾಸಕರು ಧರಣಿ ನಡೆಸಿದರು.

ಬುಧವಾರ ವಿಧಾನಸೌಧದ ಆವರಣದಲ್ಲಿನ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಕಾಫಿ ಬೆಳೆ ಹಾನಿಗೀಡಾಗಿರುವ ಭಾವಚಿತ್ರಗಳ ಭಿತ್ತಿಪತ್ರಗಳನ್ನು ಹಿಡಿದು ಧರಣಿ ನಡೆಸಿದ ಶಾಸಕರಾದ ಸಿ.ಟಿ.ರವಿ, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವು ಮಂದಿ ಮೌನ ಸತ್ಯಾಗ್ರಹ ನಡೆಸಿದರು.

ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಮಳೆಯಾಗಿದ್ದು, ಜಿಲ್ಲೆ ವ್ಯಾಪ್ತಿಯಲ್ಲಿನ ಅಣೆಕಟ್ಟುಗಳು ಭರ್ತಿಯಾಗಿವೆ. ಆದರೆ ಮಳೆಯಿಂದ ಕಾಫಿ, ಕರಿಮೆಣಸು ಸೇರಿದಂತೆ ಅನೇಕ ಬೆಳೆಗಳಿಗೆ ಹಾನಿಯಾಗಿದೆ. ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಣೆ ಮಾಡಬೇಕು ಹಾಗೂ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಜಿಲ್ಲೆಯಲ್ಲಿ ಸಾವಿನ ಮನೆಗೆ ಹೋದರೂ ರಸ್ತೆ ಹಾಳಾಗಿರುವ ಮಾತುಕೇಳಿ ಬರುತ್ತಿದೆ. ಮಳೆಯಿಂದ ಹಾನಿಯಾದ ರಸ್ತೆ ಹಾಗೂ ಮನೆಗಳ ದುರಸ್ತಿಗೆ ಗ್ರಾ.ಪಂ. ಗಳಿಗೆ ವಿಶೇಷ ಪ್ಯಾಕೇಜ್ ನೀಡುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಸಿಎಂಗೆ ಕಿರುಕುಳ: ಸಿಎಂ ಕುಮಾರಸ್ವಾಮಿಗೆ ಕಾಂಗ್ರೆಸ್ಸಿನಿಂದ ನಿತ್ಯವೂ ಕಿರುಕುಳ ಆಗುತ್ತಿದ್ದು, ಅದನ್ನು ತಡೆದುಕೊಳ್ಳಲು ಅವರಿಗೆ ಆಗುತ್ತಿಲ್ಲ. ಸರಕಾರ ಅಧಿಕಾರ ಪೂರೈಸುವ ಬಗ್ಗೆ ಸ್ವತಃ ಎಚ್‌ಡಿಕೆಗೆ ವಿಶ್ವಾಸವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಯಾವುದೇ ಸಮಯದಲ್ಲಿ ಸರಕಾರ ಬಿದ್ದು ಹೋಗುವ ಸಾಧ್ಯತೆ ಇದೆ ಎಂದು ಸಿ.ಟಿ.ರವಿ ಭವಿಷ್ಯ ನುಡಿದರು.

ವಿಪಕ್ಷ ನಾಯಕ ಯಡಿಯೂರಪ್ಪ ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿ. ಅವರು ಎಲ್ಲವನ್ನೂ ಅರಿತು ಮಾತನಾಡುತ್ತಾರೆಂದ ರವಿ, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಹೀಗಾಗಿ ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಿದ್ದಾರೆ ಎಂದು ಲೇವಡಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News