ಅಸ್ಸಾಂ ಎನ್‍ಆರ್‍ಸಿ: ಮಾನವೀಯ ದುರಂತ ತಪ್ಪಿಸುವಂತೆ ಎಚ್ಚರಿಕೆ ನೀಡಿದ ಪಾಪ್ಯುಲರ್ ಫ್ರಂಟ್
ಬೆಂಗಳೂರು,ಅ.01: ಅಸ್ಸಾಂನಲ್ಲಿ ದೊಡ್ಡ ಜನಸಂಖ್ಯೆಯ ಬಂಗಾಳಿ ಭಾಷೆ ಮಾತನಾಡುವ ಭಾರತೀಯ ನಾಗರಿಕರು ತಮ್ಮ ಸ್ವಂತ ತಾಯ್ನಾಡಿನಲ್ಲಿ ನಿರಾಶ್ರಿತರಾಗುವುದನ್ನು ತಡೆಯಲು ಸರಕಾರ, ನ್ಯಾಯಾಂಗ, ರಾಷ್ಟ್ರೀಯ ರಾಜಕೀಯ ಪಕ್ಷಗಳು ಮತ್ತು ಮಾನವ ಹಕ್ಕುಗಳ ಏಜೆನ್ಸಿಗಳು ಕೂಡಲೇ ಮಧ್ಯಪ್ರವೇಶಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್‍ಮೇನ್ ಇ.ಅಬೂಬಕರ್ ಆಗ್ರಹಿಸಿದ್ದಾರೆ.
ನಾಗರಿಕರ ರಾಷ್ಟ್ರೀಯ ನೋಂದಣಿ(ಎನ್‍ಆರ್‍ಸಿ)ಯ ಎರಡನೇ ಅಂತಿಮ ಕರಡಿನ ಕುರಿತು ಪ್ರತಿಕ್ರಿಯಿಸಿರುವ ಅವರು, ಅಸ್ಸಾಂನಲ್ಲಿ ಉದ್ಭವಿಸಿರುವ ಅತ್ಯಂತ ದೊಡ್ಡ ಮಾನವೀಯ ದುರಂತದ ಕುರಿತು ಎಚ್ಚರಿಸಿದ್ದಾರೆ.
40 ಲಕ್ಷಕ್ಕೂ ಅಧಿಕ ಮಂದಿ, ಹೆಚ್ಚಾಗಿ ಬಂಗಾಳಿ ಭಾಷಿಕ ಅಸ್ಸಾಮಿಗರನ್ನು ಎನ್‍ಆರ್‍ಸಿಯ 2ನೇ ಅಂತಿಮ ಕರಡಿನಿಂದ ಹೊರಗಿಡಲಾಗಿರುವುದು ತೀವ್ರ ಆಘಾತಕಾರಿಯಾಗಿದೆ. ಒಂದು ವೇಳೆ ಈ ನಿರ್ಧಾರವು ಜಾರಿಯಾದರೆ ಅವರನ್ನು ತಮ್ಮದೇ ಜನ್ಮನಾಡಿನಲ್ಲಿ ಅಕ್ರಮ ವಲಸಿಗರಾಗಿ ಘೋಷಿಸುವುದು ಬಹುತೇಕ ಖಚಿತವಾಗಲಿದೆ. ಎಲ್ಲಾ ರೀತಿಯ ನಾಗರಿಕತ್ವದ ನಿರಾಕರಣೆ, ರಾಜಕೀಯ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕೊನೆಗೆ ಪೊಲೀಸರು ಮತ್ತು ಸೇನೆಯ ದೌರ್ಜನ್ಯಗಳ ಹೊರತಾಗಿ ಅವರಿಗಾಗಿ ಕಾಯುತ್ತಿರುವುದಾದರೂ ಏನು ಎಂದು ಪ್ರಶ್ನಿಸಿದ್ದಾರೆ.
ಅವರನ್ನು ತಕ್ಷಣವೇ ಗಡಿಪಾರು ಮಾಡಲಾಗುವುದಿಲ್ಲ ಅಥವಾ ಶಿಬಿರಗಳಿಗೆ ಕಳುಹಿಸಲಾಗುವುದಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ನೀಡುತ್ತಿರುವ ಭರವಸೆಗಳು ಸಮಸ್ಯೆಯನ್ನು ಬಗೆಹರಿಸುವ ಯಾವುದೇ ಉದ್ದೇಶವನ್ನು ಸೂಚಿಸುತ್ತಿಲ್ಲ. ಒಂದು ವೇಳೆ ಅವರು ಆಗಸ್ಟ್ 30ರಿಂದ ಸೆಪ್ಟಂಬರ್ 20ರ ವರೆಗೆ ಒಂದು ತಿಂಗಳೊಳಗಾಗಿ ನಾಗರಿಕತ್ವವನ್ನು ಸಾಬೀತುಪಡಿಸಲು ಸಫಲರಾದರೆ ಪಟ್ಟಿಯಲ್ಲಿ ಸ್ಥಾನ ಪಡೆಯಲು ಅವರು ಅವಕಾಶವನ್ನು ಹೊಂದಿರುತ್ತಾರೆ ಎಂದು ಅಧಿಕಾರ ವರ್ಗವು ಪ್ರತಿಪಾದಿಸಿದೆ. ಇದೊಂದು ಕ್ರೂರ ವ್ಯಂಗ್ಯ ಮಾತ್ರವೇ ಆಗಿದೆ. ಬಾಂಗ್ಲಾದೇಶವಾಗಲೀ ಅಥವಾ ಪಶ್ಚಿಮ ಬಂಗಾಳ ರಾಜ್ಯವಾಗಲೀ ಅಸ್ಸಾಂನಿಂದ ಗಡಿಪಾರು ಮಾಡಲಾದವರನ್ನು ಸ್ವೀಕರಿಸಲು ತಯಾರಿಲ್ಲ. ಎನ್‍ಆರ್‍ಸಿಯಿಂದ ವಿದೇಶಿಗರಾಗಿ ಘೋಷಣೆಯಾದ ಜನರ ಅರ್ಧದಷ್ಟು ಸಂಖ್ಯೆಯನ್ನಿಡಲೂ ನಿರಾಶ್ರಿತರ ಶಿಬಿರ ಅಥವಾ ಮುಕ್ತ ಜೈಲು ಸಾಕಾಗದು. ಆದುದರಿಂದ ಈ ನಡೆಯ ಹಿಂದಿರುವ ಜನಾಂಗೀಯವಾದಿ ಮತ್ತು ಫ್ಯಾಶಿಸ್ಟ್ ಶಕ್ತಿಗಳ ನೈಜ ಅಜೆಂಡಾವನ್ನು ಅರಿತುಕೊಳ್ಳುವ ಅಗತ್ಯವಿದೆ. ಬಹುತೇಕ ಮುಸ್ಲಿಮರಾಗಿರುವ ಬಂಗಾಳಿ ಜನಸಂಖ್ಯೆಯ ದೊಡ್ಡವರ್ಗಕ್ಕೆ 2019ರ ಲೋಕಸಭಾ ಚುನಾವಣೆಗೂ ಮುನ್ನವೇ ನಾಗರಿಕತ್ವದ ಹಕ್ಕನ್ನು ನಿರಾಕರಿಸುವುದು ಇವರ ಉದ್ದೇಶವಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.