ಪೂಜೆ ನೆಪದಲ್ಲಿ ಕೋಟ್ಯಂತರ ರೂಪಾಯಿ ದೋಚಿದ್ದ ನಕಲಿ ಬಾಬಾ ಸೆರೆ
ಬೆಂಗಳೂರು, ಆ.1: ಪೂಜೆಯ ಫಲದಿಂದಾಗಿ ಬಾಬಾ ಕಾಣಿಸಿಕೊಳ್ಳುತ್ತಾನೆ ಎಂದೆಲ್ಲಾ ನಂಬಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚುತ್ತಿದ್ದ ಆರೋಪದಡಿ ನಕಲಿ ಬಾಬಾ ಓರ್ವನನ್ನು ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿ, 1.35 ಕೋಟಿ ರೂ. ಮೌಲ್ಯದ 3 ಕೆ.ಜಿ. 750 ಗ್ರಾಂ ತೂಕದ ಚಿನ್ನ ವಶಕ್ಕೆ ಪಡೆಯವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಕೋರಮಂಗಲ 1ನೆ ಬ್ಲಾಕ್ ಜಕ್ಕಸಂದ್ರ 6ನೆ ಕ್ರಾಸ್ ನಿವಾಸಿ ಎಸ್.ಕಿರಣ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಈತ ತಮಿಳುನಾಡಿನಲ್ಲಿ ಆಟೊ ಚಾಲಕನಾಗಿದ್ದ ಎಂದು ಪೊಲೀಸರು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸಿಕ್ಕಿದ್ದು ಹೇಗೆ: ಆರೋಪಿ ಪತ್ನಿ ರೇಷ್ಮಾ ಎಂಬಾಕೆಯಿಂದ ಕೋರಮಂಗಲದ ಜಯಂತ್ ಅವರ ಪತ್ನಿಯ ದೈವಭಕ್ತಿಯ ಬಗ್ಗೆ ತಿಳಿದುಕೊಂಡಿದ್ದ ಕಿರಣ್, ಬಾಬಾ ಹೆಸರಿನಲ್ಲಿ ವಂಚಿಸಿದ್ದಾರೆ ಎನ್ನಲಾಗಿದೆ.
ಜಯಂತ್ ಮನೆಯಲ್ಲಿ ಇಲ್ಲದಿದ್ದಾಗ ರೇಷ್ಮಾ ಅವರು, ನಿಮ್ಮ ಮನೆಯವರಿಗೆ ಗಂಡಾಂತರ ಇದೆ. ಬಾಬಾ ಪೂಜೆ ಮಾಡಿ ದೋಷ ನಿವಾರಣೆ ಮಾಡಿಕೊಡುತ್ತೇನೆ ಎಂದು ನಂಬಿಸಿ ಕೆಲವು ಚಿನ್ನದ ಆಭರಣಗಳನ್ನು ಪಡೆದುಕೊಂಡಿದ್ದಾಳೆ. ಬಳಿಕ ಒಡವೆಗಳನ್ನು ಇಟ್ಟಿರುವ ಸ್ಥಳ ಅರಿತುಕೊಂಡು ಪತಿ ಕಿರಣ್‌ನೊಂದಿಗೆ ಸೇರಿ ಅವುಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಜಯಂತ್ ಅವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳವು ಮಾಡಿದ್ದ ಚಿನ್ನಾಭರಣಗಳನ್ನು ಆರೋಪಿಗಳು ಚಿಕ್ಕಪೇಟೆಯ ಇತರೆಡೆಗಳಲ್ಲಿ ಮಾರಾಟ ಮಾಡಿ ಹೊಸದಾಗಿ ಚಿನ್ನದ ಆಭರಣಗಳನ್ನು ಮಾಡಿಸಿಕೊಂಡಿದ್ದರು. ಮಾತ್ರವಲ್ಲ ಕಾರು, ದುಬಾರಿ ಬೈಕ್ ಖರೀಸಿದ್ದರು. ವಾಸದ ಮನೆಯನ್ನು ಕೋರಮಂಗಲದ ಪ್ರತಿಷ್ಠಿತ ಬಡಾವಣೆಗೆ ಸ್ಥಳಾಂತರ ಮಾಡಿಕೊಂಡು ಒಂದು ಫ್ಲಾಟನ್ನು ಪಡೆದು ಐಷಾರಾಮಿ ಜೀವನ ನಡೆಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿಯನ್ನು ಬಂಧಿಸಿರುವ ಕೋರಮಂಗಲ ಪೊಲೀಸರು ಒಟ್ಟು 1.35 ಕೋಟಿ ರೂ. ಬೆಲೆಬಾಳುವ ಸುಮಾರು 3 ಕೆ.ಜಿ. ಗ್ರಾಂ ಚಿನ್ನ, 2.5 ಕೆ.ಜಿ.ಬೆಳ್ಳಿ, ಕಂಚಿನ ವಸ್ತುಗಳು, 2 ಲಕ್ಷ ರೂ. ನಗದು ಹಾಗೂ ಒಂದು ಕಾರು, ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಆಗ್ನೇಯ ಭಾಗದ ಡಿಸಿಪಿ ಬೋರಲಿಂಗಯ್ಯ ಅವರ ಮಾರ್ಗದರ್ಶನದಲ್ಲಿ ಮಡಿವಾಳ ಉಪ ಭಾಗದ ಸಹಾಯಕ ಪೊಲೀಸ್ ಆಯುಕ್ತ ಸಂಪತ್ ಕುಮಾರ್ ಅವರ ಮೇಲ್ವಿಚಾರಣೆಯಲ್ಲಿ ಕೋರಮಂಗಲ ಪೊಲೀಸ್ ಠಾಣೆ ಪಿಐ ಮಂಜುನಾಥ, ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಪೊಲೀಸರ ಈ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಶ್ಲಾಘಿಸಿದ್ದಾರೆ.