ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬಿಜೆಪಿ ಸಹಕಾರ: ಜೆಡಿಎಸ್‌ ಮಾಜಿ ಶಾಸಕ ಕೋನರೆಡ್ಡಿ ಆರೋಪ

Update: 2018-08-01 14:21 GMT

ಬೆಂಗಳೂರು, ಆ. 1: ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಬಿಜೆಪಿ ಬೆಂಬಲ ನೀಡುತ್ತಿದ್ದು, ಅವರ ಸಹಕಾರದಿಂದಲೇ ಉತ್ತರ ಕರ್ನಾಟಕದಲ್ಲಿ ಚಳವಳಿಯ ಕಿಚ್ಚು ಹಬ್ಬಲು ಕಾರಣ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆ.2ಕ್ಕೆ ಕರೆ ನೀಡಿರುವ ಉತ್ತರ ಕರ್ನಾಟಕ ಬಂದ್ ಹಿಂಪಡೆಯಲು ಉತ್ತರ ಕರ್ನಾಟಕ ಅಭಿವೃದ್ಧಿ ಸಮಿತಿ ಮುಂದಾದರೆ, ಅದಕ್ಕೆ ಬಿಜೆಪಿ ಮುಖಂಡರು ಅಡ್ಡಿಪಡಿಸುವ ಮೂಲಕ ಪ್ರತಿಭಟನೆಗೆ ಕುಮ್ಮಕ್ಕು ನೀಡಿದೆ ಎಂದು ದೂರಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ನಿನ್ನೆ ಮಠಾಧೀಶರು ನಡೆಸಿದ ಪ್ರತಿಭಟನೆ ಪ್ರಾಯೋಜಕತ್ವ ವಹಿಸಿದ್ದೇ ಬಿಜೆಪಿ ಎಂದ ಅವರು, ಒಂದು ಕಡೆ ಪ್ರತಿಭಟನೆ ಮಾಡುತ್ತ ಇನ್ನೊಂದು ಕಡೆ ಅಭಿವೃದ್ಧಿ ಬಗ್ಗೆ ಒತ್ತು ನೀಡಲು ನಾವು ಆಗ್ರಹಿಸಿದ್ದೇವೆ ಎನ್ನುತ್ತಾರೆ. ಮತ್ತೊಂದು ಕಡೆ ಬಿಎಸ್‌ವೈ ನೇತೃತ್ವದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ಧ್ವಜಾರೋಹಣ ಮಾಡುವ ಪ್ರಯತ್ನ ಮಾಡಲಾಗಿದೆ. ನಾವು ಪ್ರತ್ಯೇಕ ರಾಜ್ಯಕ್ಕೆ ಬೇಡಿಕೆ ಇಡುತ್ತಿಲ್ಲ ಎಂದು ಹೇಳುತ್ತಲೆ ಬಿಜೆಪಿ ಒಡಕು ಮೂಡಿಸಲು ಮುಂದಾಗಿದೆ. ಈ ಬಗ್ಗೆ ಬಿಜೆಪಿ ಮುಖಂಡರು ಮೊದಲು ಸ್ಪಷ್ಟಣೆ ನೀಡಬೇಕು ಎಂದು ಆಗ್ರಹಿಸಿದರು. ಉತ್ತರ ಕರ್ನಾಟಕ ಭಾಗದಿಂದ ಸಾಕಷ್ಟು ಜನ ಸಚಿವರು ಬಂದಿದ್ದಾರೆ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಉ.ಕ. ಹಿಂದುಳಿದಿದೆ. ಪ್ರತ್ಯೇಕ ರಾಜ್ಯದ ಕೂಗು ಇವತ್ತಿನ ಸರಕಾರದ ವಿರುದ್ಧ ಅಲ್ಲ. ಈ ಚಳವಳಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ನೀವೇ ಕಟ್ಟಿಸಿದ ಸುವರ್ಣಸೌಧ ನಿಷ್ಕ್ರಿಯವಾಗಿದೆ. ಆಡಳಿತಾತ್ಮಕ ದೃಷ್ಟಿಯಿಂದ ಅದನ್ನು ಪುನಶ್ಚೇತನಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.

ಲೋಕಸಭಾ ಚುನಾವಣೆ ಎದುರಾಗುತ್ತಿರುವ ಹೊತ್ತಿನಲ್ಲಿ ಉತ್ತರ ಕರ್ನಾಟಕ ವಿಚಾರ ಬಿಜೆಪಿ ಪಾಲಿಗೆ ವರದಾನವಾಗಿದ್ದು, ಈ ವಿಷಯವನ್ನು ಜೀವಂತವಾಗಿರಿಸುವ ಪ್ರಯತ್ನ ಮಾಡಿದೆ. ಆ ಮೂಲಕ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ, ಅತಿ ಹೆಚ್ಚು ಸ್ಥಾನವನ್ನು ಗೆಲ್ಲುವುದು ಇದರ ಉದ್ದೇಶ ಎಂದು ವಾಗ್ದಾಳಿ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News