×
Ad

ಕುಣಿಗಲ್ ರೌಡಿ ಗಿರಿ ಸೆರೆ: 14 ದಿನಗಳ ನ್ಯಾಯಾಂಗ ಬಂಧನ

Update: 2018-08-01 19:57 IST

ಬೆಂಗಳೂರು, ಆ.1: ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಸಜ್ಜಾಗಿದ್ದ ಆರೋಪದಡಿ ಕುಣಿಗಲ್ ರೌಡಿ ಗಿರಿ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹೊಸೂರು ಗ್ರಾಮ ನಿವಾಸಿ ಗಿರೀಶ್ ಯಾನೆ ಗಿರಿ, ಇಲ್ಲಿನ ಕಾಮಾಕ್ಷಿಪಾಳ್ಯದ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ. ಈತನ ವಿರುದ್ಧ ದರೋಡೆ ಸೇರಿದಂತೆ ಬರೋಬ್ಬರಿ 90 ಪ್ರಕರಣಗಳು ದಾಖಲಾಗಿವೆ ಎಂದು ಸಿಸಿಬಿ ತಿಳಿಸಿದೆ. ಇದೇ ಪ್ರಕರಣದಲ್ಲಿ ಕುಣಿಗಲ್ ತಾಲೂಕಿನ ಅಮೃತೂರಿನ ಕೆ. ಹೊನ್ನಮಾಚನಹಳ್ಳಿಯ ಶ್ರೀನಿವಾಸ್(30), ವಿನೋದ್(24) ಹಾಗೂ ಬೆಂಗಳೂರಿನ ಲಗ್ಗೆರೆಯ 50 ಅಡಿ ರಸ್ತೆ, ಚೌಡೇಶ್ವರಿನಗರ ನಿವಾಸಿ ಆನಂದ್ ಕುಮಾರ್(28) ಬಂಧಿತರು ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಶ್ರೀನಿವಾಸ್ ಸಹ ಹನುಮಂತನಗರ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದು, ಈತನ ವಿರುದ್ಧ 45ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಮಂಗಳವಾರ ಹೆಗ್ಗನಹಳ್ಳಿ ಮುಖ್ಯರಸ್ತೆಯಿಂದ ಜಿ.ಕೆ.ಡಬ್ಲ್ಯು ಬಡಾವಣೆ ಕಡೆ ಹೋಗುವ ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಉದ್ಯಮಿಯೊಬ್ಬರ ದರೋಡೆಗೆ ಸಜ್ಜಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಮಾರಕಾಸ್ತ್ರ ಹಾಗೂ ಕಾರು ವಶಕ್ಕೆ ಪಡೆಯಲಾಗಿದ್ದು, ಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಪ್ರಕಟನೆ ತಿಳಿಸಿದೆ.

14 ದಿನಗಳ ನ್ಯಾಯಾಂಗ ಬಂಧನ
ಉದ್ಯಮಿಗೆ ಬೆದರಿಕೆ ಪ್ರಕರಣ ಹಿನ್ನೆಲೆಯಲ್ಲಿ ಬುಧವಾರ ಕುಣಿಗಲ್ ಗಿರಿ ಹಾಗೂ ಆತನ ಸಹಚರರನ್ನು ನಗರದ 7ನೇ ಎಸಿಎಂಎಂ ನ್ಯಾಯಾಲಯಕ್ಕೆ ರಾಜಗೋಪಾಲನಗರ ಪೊಲೀಸರು ಆರೋಪಿಗಳನ್ನು ಹಾಜರುಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ಆದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News