×
Ad

ಎಸ್ಸಿ-ಎಸ್ಟಿ ಭಡ್ತಿ ಮೀಸಲು ಕಾಯ್ದೆ ಜಾರಿಗೆ ಅನುಮತಿ ಕೋರಿ ಸುಪ್ರೀಂಗೆ ಅರ್ಜಿ: ಡಾ.ಜಿ.ಪರಮೇಶ್ವರ್

Update: 2018-08-01 20:24 IST

ಬೆಂಗಳೂರು, ಆ.1: ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಭಡ್ತಿ ಸಂಬಂಧ, ಸರಕಾರ ತಂದಿರುವ ಕಾಯಿದೆ ಅನುಷ್ಠಾನ ಮಾಡಲು ಅವಕಾಶ ಕಲ್ಪಿಸುವಂತೆ ಅಥವಾ ಶೀಘ್ರವೇ ತೀರ್ಪು ನೀಡುವಂತೆ ಸುಪ್ರೀಂಕೋರ್ಟ್‌ಗೆ ಇನ್ನೆರಡು ದಿನಗಳಲ್ಲಿ ಅರ್ಜಿ ಸಲ್ಲಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮುಂಭಡ್ತಿಗೆ ಸಂಬಂಧಿಸಿದಂತೆ ನಡೆದ ಉನ್ನತ ಮಟ್ಟದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪರಿಶಿಷ್ಟ ಜಾತಿಯವರಿಗೆ ಎಂದೂ ಮೋಸವಾಗದ ರೀತಿ ನಮ್ಮ ಸರಕಾರ ನೋಡಿಕೊಳ್ಳಲಿದೆ. ಭಡ್ತಿ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಆ.14ಕ್ಕೆ ವಿಚಾರಣೆ ಬರಲಿದೆ. ಅಲ್ಲಿವರೆಗೂ ಕಾಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅದಕ್ಕಾಗಿಯೇ, ಹಿಂದಿನ ಸರಕಾರದಲ್ಲಿ ತಂದ ಕಾಯಿದೆಯನ್ನು ಅನುಷ್ಠಾನ ಮಾಡಲು ಸುಪ್ರೀಂಕೋರ್ಟ್‌ಗೆ ಒಂದೆರಡು ದಿನದಲ್ಲಿ ಅರ್ಜಿ ಸಲ್ಲಿಸಲಾಗುತ್ತದೆ. ಇಲ್ಲದಿದ್ದರೆ ಕನಿಷ್ಠ ಈ ಪ್ರಕರಣದ ತೀರ್ಪನ್ನು ಶೀಘ್ರವಾಗಿ ನೀಡುವಂತೆ ಕೇಳಿಕೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಅರ್ಜಿ ಸಲ್ಲಿಕೆ ವಿಚಾರದ ಬಗ್ಗೆ ಮತ್ತೊಮ್ಮೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಕೆಲವರಿಗೆ ಹಿಂಭಡ್ತಿಯಾಗಿದೆ. ಯಾವ ಇಲಾಖೆಯಲ್ಲೂ ಹಿಂಭಡ್ತಿ ಹಾಗೂ ಹಿಂಭಡ್ತಿ, ಮುಂಭಡ್ತಿ ಗೊಂದಲದಲ್ಲಿ ಸಾಕಷ್ಟು ಅಧಿಕಾರಿಗಳಿಗೆ ಮೂರು ನಾಲ್ಕು ತಿಂಗಳಿಂದ ವೇತನ ನೀಡದೇ ಇರುವುದು ಗಮನಕ್ಕೆ ಬಂದಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ವೇತನ ನೀಡುವಂತೆ ನಿರ್ದೇಶನ ನೀಡಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಭೈರೇಗೌಡ, ಶಿಕ್ಷಣ ಸಚಿವ ಎನ್.ಮಹೇಶ್, ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಡ್ವೋಕೇಟ್ ಜನರಲ್ ಉದಯ್ ಹೊಳ್ಳ, ಕಾನೂನು ಕಾರ್ಯದರ್ಶಿ ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮಿನಾರಾಯಣ, ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News