ಎಲೆಕ್ಟ್ರಿಕಲ್ ವಾಹನಗಳ ಬಳಕೆಯಿಂದ ಮಾಲಿನ್ಯ ನಿಯಂತ್ರಣ: ಡಿಸಿಎಂ ಡಾ.ಜಿ.ಪರಮೇಶ್ವರ್
ಬೆಂಗಳೂರು, ಆ. 1: ಬೆಂಗಳೂರು ನಗರದ ಮಾಲಿನ್ಯ ನಿಯಂತ್ರಣ ದೃಷ್ಟಿಯಿಂದ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ನೋಂದಣಿ ಸ್ಥಗಿತಗೊಳಿಸುವ ಅಗತ್ಯವಿದೆ. ಸಿಎನ್‌ಜಿ, ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಿಸುವುದರಿಂದ ಮಾಲಿನ್ಯ ತಗ್ಗಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಲಂಡನ್ ಉಪ ಮೇಯರ್ ಶಿರ್ಲಿ ರೋಡ್ರಿಗಸ್ ನೇತೃತ್ವದ ಪ್ರತಿನಿಧಿಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಮಾಲಿನ್ಯ ನಿಯಂತ್ರಣಕ್ಕೆ ನಗರದ ಕೆಲವು ಭಾಗಗಳನ್ನು ಆಯ್ದು ಪ್ರಾಯೋಗಿಕವಾಗಿ ಏರ್ ಕ್ವಾಲಿಟಿ ಕಂಟ್ರೋಲ್‌ನನ್ನು ಅನುಷ್ಠಾನ ಮಾಡಲು ಲಂಡನ್ ಮಹಾನಗರ, ಸಿ 40 ಸಿಟಿಸ್‌ನೊಂದಿಗೆ ಬಿಬಿಎಂಪಿ ಒಪ್ಪಿದೆ ಎಂದರು.
ಹತ್ತು ವರ್ಷದಲ್ಲಿ ಬೆಂಗಳೂರು ನಗರದ ವಿಸ್ತಾರ ಹೆಚ್ಚಿದೆ. ಮಾಲಿನ್ಯ ಪ್ರಮಾಣವೂ ಹೆಚ್ಚಿದೆ. ಆದರೆ, ಹೊಸದಿಲ್ಲಿ, ಮುಂಬೈಗೆ ಹೋಲಿಸಿದರೆ ನಗರದ ಮಾಲಿನ್ಯ ಪ್ರಮಾಣ ಕಡಿಮೆ ಇದೆ ಎಂಬುದು ಸಮಾಧಾನದ ಸಂಗತಿ. ಆದರೂ ಮಾಲಿನ್ಯ ಪ್ರಮಾಣದ ಬಗ್ಗೆ ಈಗಿನಿಂದಲೇ ಚಿಂತಿಸಬೇಕಿದೆ ಎಂದರು.
ಲಂಡನ್‌ನಲ್ಲಿ ಈಗಾಗಲೇ ಎಲೆಕ್ಟ್ರಿಕ್ ಬಸ್‌ಗಳಿವೆ. ಅಲ್ಲಿ ಮಾಲಿನ್ಯ ನಿಯಂತ್ರಣ, ಕ್ವಾಲಿಟಿ ಏರ್ ಕೂಡ ಇದೆ. ಈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಆಗಬೇಕಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಕಸ ಸಂಸ್ಕರಣೆ, ಸಂಚಾರ ದಟ್ಟಣೆ ನಿರ್ವಹಣೆ ಆಗಬೇಕು. ಇದಕ್ಕೆ ಲಂಡನ್‌ನ ಯೋಜನೆಯನ್ನು ಇಲ್ಲಿ ಅನುಷ್ಠಾನ ಆಗಬೇಕಿದೆ. ನಗರದ ಮೂಲ ಸಮಸ್ಯೆ ಬಗೆಹರಿಯಬೇಕು ಎಂದರು. ಟೆಂಡರ್ ಶ್ಯೂರ್ ಯೋಜನೆಯಡಿ ಸೈಕಲಿಂಗ್ ಟ್ರಾಕ್ ಅಗತ್ಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕೆರೆಗಳಲ್ಲಿ ನೊರೆ ಸಮಸ್ಯೆಯ ಬಗ್ಗೆ ಚರ್ಚಿಸಲಾಯಿತು. ಇದನ್ನು ಈ ಯೋಜನೆಯಡಿ ಕೈಗೊಂಡರೆ ಈ ಸಮಸ್ಯೆ ನಿವಾರಣೆಗೆ ಸಹಕಾರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.