ಪಕ್ಷದ ಕಚೇರಿಯಲ್ಲಿ ಅಹವಾಲು ಆಲಿಸುವುದರಿಂದ ವಿಧಾನಸೌಧದಲ್ಲಿ ಸಾರ್ವಜನಿಕ ಒತ್ತಡ ಕಡಿಮೆ: ಸಚಿವ ವೆಂಕಟರಾವ್
ಬೆಂಗಳೂರು, ಆ.1: ಪಕ್ಷದ ಕಚೇರಿಯಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಒದಗಿಸುವುದರಿಂದ ವಿಧಾನಸೌಧದಲ್ಲಿ ಸಾರ್ವಜನಿಕರ ಒತ್ತಡವನ್ನು ಕಡಿಮೆ ಮಾಡಬಹುದಾಗಿದೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದರು.
ಬುಧವಾರ ನಗರದ ಜೆಡಿಎಸ್ ಕೇಂದ್ರ ಕಚೇರಿ(ಜೆ.ಪಿ.ಭವನ)ಯಲ್ಲಿ ಸಾರ್ವಜನಿಕರು ಹಾಗೂ ಪಕ್ಷದ ಕಾರ್ಯಕರ್ತರ ಮನವಿ ಆಲಿಸಿ, ಪರಿಹಾರ ಒದಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಸೂಚನೆಯ ಹಿನ್ನೆಲೆಯಲ್ಲಿ ಪಕ್ಷದ ಸಚಿವರು ತಮಗೆ ನಿಗದಿಪಡಿಸಿದ ದಿನಗಳಂದು ಜೆಡಿಎಸ್ ಕಚೇರಿಗೆ ಆಗಮಿಸಿ ಸಾರ್ವಜನಿಕರು ಹಾಗೂ ಕಾರ್ಯಕರ್ತರ ಅಹವಾಲುಗಳನ್ನು ಆಲಿಸಲಿದ್ದಾರೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಿಂದಾಗಿ ಸಾರ್ವಜನಿಕರು, ಕಾರ್ಯಕರ್ತರು ಹಾಗೂ ಸರಕಾರದ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯಾಗಲಿದೆ. ಇದರಿಂದ, ಸಚಿವರನ್ನು ಹುಡುಕಿಕೊಂಡು ಸಾರ್ವಜನಿಕರು ವಿಧಾನಸೌಧಕ್ಕೆ ಬರುವುದು ತಪ್ಪುತ್ತದೆ. ಅಲ್ಲದೆ, ಇಲ್ಲಿ ಸಚಿವರನ್ನುಭೇಟಿ ಮಾಡಲು ಯಾವುದೇ ಪಾಸ್‌ಗಳನ್ನು ಪಡೆಯುವ ಅವಶ್ಯಕತೆಯೂ ಇರುವುದಿಲ್ಲ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.
ಸಾರ್ವಜನಿಕರು ಹಾಗೂ ಕಾರ್ಯಕರ್ತರು ಮುಕ್ತವಾಗಿ ನಮ್ಮ ಜೊತೆ ಚರ್ಚೆ ಮಾಡಲು ಸಾಧ್ಯವಾಗುತ್ತದೆ. ನಮ್ಮ ಪಕ್ಷದ ಪ್ರತಿಯೊಬ್ಬ ಸಚಿವರು ತಿಂಗಳಿಗೆ ಎರಡು ಬಾರಿ ಈ ಕಚೇರಿಗೆ ಭೇಟಿ ನೀಡಲಿದ್ದಾರೆ. ಇಲ್ಲಿ ಕೂತು ಕೆಲಸ ಮಾಡುವುದು ವಿಧಾನಸೌಧದಲ್ಲಿ ಕೂತು ಕೆಲಸ ಮಾಡುವುದಕ್ಕಿಂತ ಹೆಚ್ಚು ಸಂತೋಷ ನೀಡುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ರಾಜ್ಯ ಸರಕಾರದ ಆರೋಗ್ಯ ಕಾರ್ಡ್ ಪಡೆಯಲು ಅಗತ್ಯವಿರುವ ನೋಂದಣಿ ಕೇಂದ್ರವನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ವೆಂಕಟರಾವ್ ನಾಡಗೌಡ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸುರೇಶ್ ಬಾಬು, ಬೆಂಗಳೂರು ಮಹಾನಗರ ಜೆಡಿಎಸ್ ಘಟಕದ ಅಧ್ಯಕ್ಷ ಆರ್.ಪ್ರಕಾಶ್ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.