ಮೂತ್ರಪಿಂಡ ಕಾಯಿಲೆ:ನಿಮ್ಮ ಶರೀರವು ನೀಡುವ 10 ಮುನ್ನೆಚ್ಚರಿಕೆ ಸಂಕೇತಗಳು ಗೊತ್ತೇ...?

Update: 2018-08-02 13:39 GMT

 ಮೂತ್ರಪಿಂಡಗಳು ನಮ್ಮ ಶರೀರದ ಮಹತ್ವಪೂರ್ಣ ಅಂಗಗಳಾಗಿವೆ. ಸೋಸುಕದಂತೆ ಕಾರ್ಯ ನಿರ್ವಹಿಸುವ ಅವು ಶರೀರದಲ್ಲಿಯ ತ್ಯಾಜ್ಯಗಳನ್ನು ಮತ್ತು ವಿಷವಸ್ತುಗಳನ್ನು ಮೂತ್ರದ ರೂಪದಲ್ಲಿ ಹೊರಗೆ ಹಾಕುತ್ತವೆ. ಮೂತ್ರಪಿಂಡಗಳಿಲ್ಲದೆ ಈ ಕಾರ್ಯ ಅಸಾಧ್ಯ. ಮೂತ್ರಪಿಂಡಗಳು ರಕ್ತದೊತ್ತಡವನ್ನು ಕ್ರಮಬದ್ಧಗೊಳಿಸುವ ಜೊತೆಗೆ ರಕ್ತಕೋಶಗಳನ್ನೂ ಉತ್ಪಾದಿಸುತ್ತವೆ ಮತ್ತು ಮೂಳೆಗಳನ್ನು ಸದೃಢ ಮತ್ತು ಆರೋಗ್ಯಯುತವಾಗಿರಿಸುವಲ್ಲಿ ನೆರವಾಗುತ್ತವೆ.

 ಇಂದು ಭಾರತದ ಜನಸಂಖ್ಯೆಯ ಸುಮಾರು ಶೇ.17.2ರಷ್ಟು ಭಾಗ ದೀರ್ಘಕಾಲೀನ ಮೂತ್ರಪಿಂಡ ರೋಗ(ಸಿಕೆಡಿ)ದಿಂದ ಬಳಲುತ್ತಿದೆ ಮತ್ತು ಶೇ.6ರಷ್ಟು ಜನರಲ್ಲಿ ರೋಗವು ತೃತೀಯ ಹಂತ ಮತ್ತು ಅದನ್ನು ದಾಟಿದೆ ಎನ್ನುವುದು ಆಘಾತಕಾರಿ ಮಾಹಿತಿಯಾಗಿದೆ.

 ಆದರೆ,ವೈದ್ಯರ ನೆರವಿನಿಂದ ಮೂತ್ರಪಿಂಡ ರೋಗವನ್ನು ಮೊದಲೇ ಪತ್ತೆ ಹಚ್ಚಬಹುದು ಮತ್ತು ಅದನ್ನು ಸಂಪೂರ್ಣವಾಗಿ ತಡೆಯಲೂ ಸಾಧ್ಯವಿದೆ ಎನ್ನುವುದು ಸಮಾಧಾನಕರ ಅಂಶವಾಗಿದೆ. ಮೂತ್ರಪಿಂಡ ರೋಗದ ಲಕ್ಷಣಗಳು ಗಂಭೀರವೆಂಬಂತೆ ಕಂಡುಬರುವುದಿಲ್ಲ,ಹೀಗಾಗಿ ಜನರು ರೋಗದ ಹಲವಾರು ಲಕ್ಷಣಗಳನ್ನು ಕಡೆಗಣಿಸಿಬಿಡುತ್ತಾರೆ. ಅಂತಹ 10 ಪ್ರಮುಖ ಲಕ್ಷಣಗಳಿಲ್ಲಿವೆ.....

► ಕಣಕಾಲುಗಳು ಮತ್ತು ಪಾದಗಳಲ್ಲಿ ಊತ

ಮೂತ್ರಪಿಂಡಗಳ ಕಾರ್ಯಕ್ಷಮತೆ ಕಡಿಮೆಯಾಗಿದ್ದರೆ ಹೊರಹೋಗಬೇಕಾದ ಸೋಡಿಯಂ ಶರೀರದಲ್ಲಿಯೇ ಉಳಿದುಕೊಳ್ಳುತ್ತದೆ ಮತ್ತು ಇದರ ಪರಿಣಾಮವಾಗಿ ಕಣಕಾಲುಗಳು ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ.

► ಬಳಲಿಕೆ,ನಿಶ್ಶಕ್ತಿ

 ಮೂತ್ರಪಿಂಡಗಳ ಸಾಮರ್ಥ್ಯ ತೀವ್ರವಾಗಿ ಕುಗ್ಗಿದ್ದರೆ ರಕ್ತದಲ್ಲಿ ವಿಷವಸ್ತುಗಳು ಸೇರಿಕೊಳ್ಳುತ್ತವೆ ಮತ್ತು ಅಶುದ್ಧತೆ ಹೆಚ್ಚಾಗುತ್ತದೆ. ಇದರಿಂದಾಗಿ ತೀವ್ರ ಬಳಲಿಕೆ, ನಿಶ್ಶಕ್ತಿಯುಂಟಾಗುವ ಜೊತೆಗೆ ಏಕಾಗ್ರತೆ ಸಾಧ್ಯವಾಗುವುದಿಲ್ಲ.

► ಮೂತ್ರದಲ್ಲಿ ರಕ್ತ

ಅರೋಗ್ಯಯುತವಾದ ಮೂತ್ರಪಿಂಡಗಳು ಮೂತ್ರವನ್ನು ಉತ್ಪತ್ತಿ ಮಾಡಲು ರಕ್ತವನ್ನು ಸೋಸುವಾಗ ರಕ್ತಕೋಶಗಳನ್ನು ಶರೀರದಲ್ಲಿಯೇ ಉಳಿಸುತ್ತವೆ. ಆದರೆ ಮೂತ್ರಪಿಂಡದ ಸೋಸುಕಕ್ಕೆ ಹಾನಿಯಾಗಿದ್ದಾಗ ಈ ರಕ್ತಕೋಶಗಳು ಮೂತ್ರದಲ್ಲಿ ಸೋರಿಕೆಯಾಗುತ್ತವೆ.

► ಚರ್ಮದಲ್ಲಿ ಶುಷ್ಕತೆ ಮತ್ತು ತುರಿಕೆ

ರಕ್ತದಲ್ಲಿ ಖನಿಜಗಳು ಮತ್ತು ಪೌಷ್ಟಿಕಾಂಶಗಳ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳಲು ಮೂತ್ರಪಿಂಡಗಳಿಗೆ ಸಾಧ್ಯವಾಗದಿದ್ದಾಗ ಚರ್ಮವು ಒಣಗುತ್ತದೆ ಮತ್ತು ತುರಿಕೆ ಕಾಣಿಸಿಕೊಳ್ಳುತ್ತದೆ.

► ಪದೇ ಪದೇ ಮೂತ್ರವಿಸರ್ಜನೆ

ಮೂತ್ರಪಿಂಡಗಳ ಸೋಸುಕಗಳು ಹಾನಿಗೀಡಾಗಿದ್ದರೆ,ವಿಶೇಷವಾಗಿ ರಾತ್ರಿಯ ವೇಳೆ ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕೆಂಬ ತುಡಿತವು ಹೆಚ್ಚಾಗುತ್ತದೆ.

► ನಿದ್ರೆಗೆ ತೊಂದರೆ

ಮೂತ್ರಪಿಂಡಗಳು ಸೋಸುವ ಕಾರ್ಯವನ್ನು ಸರಿಯಾಗಿ ಮಾಡದಿದ್ದಾಗ ವಿಷವಸ್ತುಗಳು ಮೂತ್ರದೊಂದಿಗೆ ಶರೀರದಿಂದ ಹೊರಗೆ ಹೋಗುವ ಬದಲು ರಕ್ತದಲ್ಲಿಯೇ ಉಳಿದುಕೊಳ್ಳುತ್ತವೆ. ಇದರಿಂದ ನಿದ್ರೆ ಮಾಡಲು ಕಷ್ಟವಾಗುತ್ತದೆ.

► ನೊರೆ ನೊರೆಯಾದ ಮೂತ್ರ

ಮೂತ್ರವನ್ನು ವಿಸರ್ಜಿಸಿದಾಗ ಅತಿಯಾದ ನೊರೆಯಿದ್ದರೆ,ವಿಶೇಷವಾಗಿ ಅವುಗಳನ್ನು ಸ್ವಚ್ಛಮಾಡಲು ಪದೇ ಪದೇ ಫ್ಲಷ್ ಮಾಡಬೇಕಾಗಿದ್ದರೆ ಅದು ಮೂತ್ರದಲ್ಲಿ ಪ್ರೋಟಿನ್ ಇದೆ ಎನ್ನುವುದನ್ನು ಸೂಚಿಸುತ್ತದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಮೂತ್ರವು ನೊರೆಯಿಂದ ಕೂಡಿರುತ್ತದೆ.

► ಕಣ್ಣುಗಳ ಸುತ್ತ ಊದಿಕೊಳ್ಳುವಿಕೆ

ಕಣ್ಣುಗಳ ಸುತ್ತ ಊದಿಕೊಂಡಿದ್ದರೆ ಅದು ಮೂತ್ರಪಿಂಡಗಳನ್ನು ಹೆಚ್ಚಿನ ಪ್ರಮಾಣದ ಪ್ರೋಟಿನ್‌ನ್ನು ಶರೀರದಲ್ಲಿ ಉಳಿಸಿಕೊಳ್ಳುವ ಬದಲು ಮೂತ್ರದಲ್ಲಿ ಸೋರಿಕೆ ಮಾಡುತ್ತಿವೆ ಎನ್ನುವುದನ್ನು ಸೂಚಿಸುತ್ತದೆ.

► ಹಸಿವು ಕ್ಷೀಣ

ಇದೊಂದು ಅತ್ಯಂತ ಸಾಮಾನ್ಯ ಲಕ್ಷಣವಾಗಿದೆ,ಆದರೆ ಮೂತ್ರಪಿಂಡದ ಸಾಮರ್ಥ್ಯ ತಗ್ಗಿದಾಗ ವಿಷವಸ್ತುಗಳು ಶರೀರದಲ್ಲಿ ಉಳಿದುಕೊಳ್ಳುವುದು ಹಸಿವು ಕ್ಷೀಣಗೊಳ್ಳಲು ಒಂದು ಕಾರಣವಾಗಿರಬಹುದು.

► ಮಾಂಸಖಂಡಗಳಲ್ಲಿ ಸೆಳೆತ

ಮೂತ್ರಪಿಂಡಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದಾಗ ಎಲೆಕ್ಟ್ರೋಲೈಟ್ ಅಸಮತೋಲನವುಂಟಾಗುತ್ತದೆ. ಉದಾಹರಣೆಗೆ ಕಡಿಮೆ ಕ್ಯಾಲ್ಸಿಯಂ ಮಟ್ಟ ಮತ್ತು ನಿಯಂತ್ರಣದಲ್ಲಿಲ್ಲದ ರಂಜಕ ಮಾಂಸಖಂಡಗಲ್ಲ್ಲಿ ಸೆಳೆತವನ್ನುಂಟು ಮಾಡುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News