×
Ad

ವರ್ಷಾಂತ್ಯಕ್ಕೆ ಪ್ರತೀ ಮನೆಗೊಂದು ಶೌಚಾಲಯ: ಸಚಿವ ಕೃಷ್ಣ ಭೈರೇಗೌಡ

Update: 2018-08-02 20:38 IST

ಬೆಂಗಳೂರು, ಆ. 2: ಈ ವರ್ಷದ ಅಕ್ಟೋಬರ್ 2ರ ಗಾಂಧಿ ಜಯಂತಿಯೊಳಗೆ ರಾಜ್ಯದ ಪ್ರತಿಯೊಂದು ಮನೆಗೆ ಶೌಚಾಲಯ ನಿರ್ಮಾಣ ಮಾಡಲಾಗುವುದು. ಸಮಯದ ಕೊರತೆಯಾದರೆ ವರ್ಷಾಂತ್ಯದ ವೇಳೆಗೆ ಮನೆಗೊಂದು ಶೌಚಾಲಯ ಒದಗಿಸುವ ಗುರಿ ಮುಟ್ಟಲಾಗುವುದು ಎಂದು  ಗ್ರಾಮೀಣಾಭಿವೃದ್ದಿ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಗುರುವಾರ ವಿಧಾನಸೌಧ ಆವರಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಆಯೋಜಿಸಲಾಗಿದ್ದ ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕರ್ನಾಟಕ-2018’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

‘ಸ್ವಚ್ಛ ಮೇವ ಜಯತೇ’ ಎಂಬ ಘೋಷವಾಕ್ಯದ ಅಡಿಯಲ್ಲಿ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ಕಾರ್ಯಕ್ರಮ ಆ.1ರಿಂದ 31ರ ವರೆಗೆ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ 680 ಜಿಲ್ಲೆ, 6980 ಗ್ರಾಮ, 34900 ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ 50ಲಕ್ಷ ನಾಗರಿಕರ ಸಂದರ್ಶನ ಮತ್ತು ಅಭಿಪ್ರಾಯ ಪಡೆಯಲಾಗುವುದು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಈಗಾಗಲೇ ಗ್ರಾಮಗಳಲ್ಲಿ 39.8ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಈ ವರ್ಷಾಂತ್ಯಕ್ಕೆ 5,53,164 ಶೌಚಾಲಯಗಳನ್ನು ನಿರ್ಮಾಣ ಬಾಕಿ ಇದ್ದು, ತ್ವರಿತಗತಿಯಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿ ಶೌಚಾಲಯಕ್ಕೆ ಕೇಂದ್ರ ಸರಕಾರ ಶೇ.60 ಹಾಗೂ ರಾಜ್ಯ ಸರಕಾರ ಶೇ.40 ರಷ್ಟು ಅನುದಾನ ನೀಡುತ್ತಿದ್ದು, ಪ್ರತಿ ಶೌಚಾಲಯಕ್ಕೆ 12ಸಾವಿರ ರೂ. ವಿನಿಯೋಗಿಸಲಾಗುತ್ತಿದೆ. ಇತ್ತೀಚಿಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಅ.2ರ ಒಳಗೆ ನಿಗದಿತ ಗುರಿ ಮುಟ್ಟಬೇಕೆಂದು ಸೂಚಿಸಲಾಗಿದೆ ಎಂದರು.

ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ತ್ಯಾಜ್ಯದಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಈ ಆಂದೋಲನದಲ್ಲಿ ಅರಿವು ಮೂಡಿಸಲಾಗುತ್ತದೆ. ಮಕ್ಕಳಿಗೆ ಇದರ ಬಗ್ಗೆ ಅರಿವು ಮೂಡಿಸಿದರೆ ಅವರು ತಮ್ಮ ಪೋಷಕರಿಗೆ ಅದರ ಬಗ್ಗೆ ಹೆಚ್ಚು ಆಸ್ಥೆ ವಹಿಸುವಂತೆ ಮಾಡುತ್ತಾರೆ. ಈ ಸ್ವಚ್ಛತಾ ಆಂದೋಲನದ ರಾಯಭಾರಿಯಾಗಿ ಮಕ್ಕಳನ್ನು ಆಯ್ದುಕೊಳ್ಳಲಾಗಿದೆ. ಮಕ್ಕಳ ಮೂಲಕವೇ ನಾವು ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಲು ಸಾಧ್ಯ ಎಂದು ಅವರು ಹೇಳಿದರು.

ಈಗಾಗಲೇ ರಾಜ್ಯದ 20 ಜಿಲ್ಲೆಗಳು ಬಹಿರ್ದೆಸೆ ಮುಕ್ತ ಜಿಲ್ಲೆಗಳಾಗಿವೆ. ಉಳಿದ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಅಕ್ಟೋಬರ್ 2ರೊಳಗೆ ಎಲ್ಲ ಜಿಲ್ಲೆಗಳಲ್ಲೂ ಶೌಚಾಲಯಗಳ ನಿರ್ಮಾಣ ಮಾಡಲಾಗುವುದು. ಅಕ್ಟೋಬರ್ 2ರೊಳಗೆ ಶೌಚಾಲಯ ನಿರ್ಮಾಣ ಸಂಪೂರ್ಣವಾಗದಿದ್ದರೆ ಈ ವರ್ಷಾಂತ್ಯದೊಳಗಂತೂ ನಿಶ್ಚಿತವಾಗಿ ಎಲ್ಲ ಹಳ್ಳಿಗಳಲ್ಲೂ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನಾಗಿ ಮಾಡುವುದು ಎಂದು ಕೃಷ್ಣ ಭೈರೇಗೌಡ ಹೇಳಿದರು.

ಮೊದಲ ಸ್ಥಾನದ ವಿಶ್ವಾಸ: ಕೇಂದ್ರದ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಸ್ವಚ್ಛತೆ ಬಗ್ಗೆ ನಡೆಸುತ್ತಿರುವ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯವೇ ಮೊದಲ ಸ್ಥಾನ ಪಡೆದುಕೊಳ್ಳಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಶಾಲಾ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಪ್ರತಿಜ್ಞೆ ವಿಧಿಯನ್ನು ಬೋಧಿಸಲಾಯಿತು. ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಜಂಟಿ ನಿರ್ದೇಶಕ ಭುವನಹಳ್ಳಿ ನಾಗರಾಜ್ ಹಾಜರಿದ್ದರು.

‘ಸ್ವಚ್ಛತೆ ಎಂಬುದು ಬಹುದೊಡ್ಡ ಸವಾಲು. ಅದಕ್ಕಾಗಿಯೇ ‘ಸ್ವಚ್ಛ ಮೇವ ಜಯತೇ’ ಅನುಷ್ಠಾನಕ್ಕೆ ಮಕ್ಕಳನ್ನು ರಾಯಭಾರಿಯನ್ನಾಗಿ ಮಾಡಿದ್ದೇವೆ. ಹೊರ ರಾಷ್ಟ್ರಗಳಲ್ಲಿ ಪೋಷಕರು ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪಾಠ ಹೇಳುತ್ತಾರೆ. ನಾವು ಮಕ್ಕಳಿಂದಲೇ ಪೋಷಕರಿಗೆ ಪಾಠ ಹೇಳಿಸುವ ಮೂಲಕ ಕಾರ್ಯಕ್ರಮ ಅನುಷ್ಠಾನಗೊಳಿಸಲಿದ್ದೇವೆ’
-ಡಾ.ಜಿ.ಪರಮೇಶ್ವರ್ ಉಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News