ಲಾಕರ್‌ನಲ್ಲಿ ಸಂಪತ್ತು ಪತ್ತೆ ಪ್ರಕರಣ: ಬಿಜೆಪಿ ಮುಖಂಡನ ಮನೆಯಲ್ಲಿ ಮುಂದುವರೆದ ಶೋಧ

Update: 2018-08-02 15:40 GMT

ಬೆಂಗಳೂರು, ಆ.2: ಬೌರಿಂಗ್ ಇನ್ಸ್‌ಟಿಟ್ಯೂಟ್‌ನಲ್ಲಿ ಬಹುಕೋಟಿ ಸಂಪತ್ತು ಪತ್ತೆಯಾಗಿದ್ದ ಪ್ರಕರಣ ಸಂಬಂಧ ಬಿಜೆಪಿ ಮುಖಂಡ ಪ್ರಸಾದ್ ರೆಡ್ಡಿ ಮನೆಯಲ್ಲಿ ಸತತ ಮೂರನೆ ದಿನವೂ ಆದಾಯ ತೆರಿಗೆ (ಐಟಿ) ತನಿಖಾಧಿಕಾರಿಗಳು ಶೋಧ ನಡೆಸಿದರು.

ನಾಲ್ಕು ದಿನಗಳ ಹಿಂದೆ ಪ್ರಸಾದ್ ರೆಡ್ಡಿ ಮಾಲಕತ್ವದ ಕೋರಮಂಗಲದಲ್ಲಿನ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಅದೇ ರೀತಿ, ಪ್ರಕರಣ ಸಂಬಂಧ ಗುರುವಾರವೂ 20ಕ್ಕೂ ಹೆಚ್ಚು ಅಧಿಕಾರಿಗಳು ಶೋಧ ನಡೆಸಿ, ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಮತ್ತಿತರರ ಮನೆಗಳ ಮೇಲೂ ದಾಳಿ ನಡೆಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನವೊಂದನ್ನು ಲಾಕರ್ ಮಾಲಕ ಅವಿನಾಶ್ ತಂದೆಗೆ ಮಾರಾಟ ಮಾಡಿದ್ದ ಎನ್ನುವ ಆರೋಪ ಕೇಳಿಬಂದಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಲಾಕರ್‌ನಲ್ಲಿ ಮಹತ್ವದ ದಾಖಲೆಗಳು ಸಿಕ್ಕಿವೆ. ಮಹತ್ವದ ದಾಖಲೆಗಳಲ್ಲಿ ಪ್ರಸಾದ್ ರೆಡ್ಡಿಗೆ ಸೇರಿದ ಇನ್ನೂ ಸಾಕಷ್ಟು ನಿವೇಶನಗಳ ಬಗ್ಗೆಯೂ ಮಾಹಿತಿ ಇದೆ ಎನ್ನಲಾಗುತಿದ್ದು, ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News