×
Ad

3 ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕ ಪ್ರಕಟಿಸದಂತೆ ಹೈಕೋರ್ಟ್ ಆದೇಶ

Update: 2018-08-02 22:01 IST

ಬೆಂಗಳೂರು, ಆ.2: ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ದಿನಾಂಕವನ್ನು ಮುಂದಿನ ಶುಕ್ರವಾರದವರೆಗೆ ಪ್ರಕಟಿಸದಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಮೌಖಿಕ ಸೂಚನೆ ನೀಡಿದೆ.

ಇತ್ತೀಚೆಗೆ ಸರಕಾರ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಹಾಗೂ ಕ್ಷೇತ್ರ ಮೀಸಲು ಪಟ್ಟಿಯನ್ನು ಹೊಸದಾಗಿ ರೂಪಿಸಿದ್ದು, ಕ್ಷೇತ್ರಗಳನ್ನು ಪುನರ್ ವಿಂಗಡಣೆ ಮಾಡುವ ವೇಳೆ ಸರಕಾರ ನಿಯಮಗಳನ್ನು ಪಾಲಿಸಿಲ್ಲ ಎಂದು ಮೈಸೂರಿನ ಶಿವಮಾದು ಹಾಗು ತುಮಕೂರಿನ ನಾಗೇಶ್ ಎಂಬುವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅದೇ ರೀತಿ ಶಿವಮೊಗ್ಗ ನಿವಾಸಿಯೊಬ್ಬರು ಮೀಸಲು ಕ್ಷೇತ್ರಗಳ ಹಂಚಿಕೆ ಸರಿಯಾಗಿಲ್ಲ ಎಂದು ಆಕ್ಷೇಪಿಸಿದ್ದಾರೆ.

ತುಮಕೂರು ಹಾಗು ಮೈಸೂರು ಅರ್ಜಿದಾರರ ಆಕ್ಷೇಪಣೆ ಅರ್ಜಿಗಳನ್ನು ನ್ಯಾ. ಅರವಿಂದ್ ಕುಮಾರ್ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು ತೀರ್ಪು ಕಾಯ್ದಿರಿಸಿದೆ. ಹಾಗೆಯೇ ಶಿವಮೊಗ್ಗ ಅರ್ಜಿದಾರರ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಆ.3ವರೆಗೂ ಈ ಮೂರು ಜಿಲ್ಲೆಗಳ ಚುನಾವಣಾ ದಿನಾಂಕ ಪ್ರಕಟಿಸದಂತೆ ಹೈಕೋರ್ಟ್ ಸೂಚಿಸಿದೆ. ಸಂವಿಧಾನದ ಅನುಚ್ಛೇದ 243 ಝಡ್ (ಜಿ) ಪ್ರಕಾರ ಒಮ್ಮೆ ಚುನಾವಣಾ ಪ್ರಕ್ರಿಯೆ ಆರಂಭವಾದರೆ, ಅದರಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಲು ಅವಕಾಶ ಇಲ್ಲದಿರುವುದರಿಂದ ಹೈಕೋರ್ಟ್‌ಗೆ ಮೌಖಿಕವಾಗಿ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News