×
Ad

ಬೆಂಗಳೂರು ಗ್ರಾಪಂ ಅಧ್ಯಕ್ಷರಿಗೆ ಖುದ್ದು ಹಾಜರಾಗಲು ಹೈಕೋರ್ಟ್ ಆದೇಶ

Update: 2018-08-02 22:04 IST

ಬೆಂಗಳೂರು, ಆ.2: ರಾಜಕೀಯ ಒತ್ತಡದಿಂದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಹೇಳಿಕೆ ನೀಡಿರುವ ಬೆಂಗಳೂರು ಗ್ರಾಮಾಂತರ ಜಿ.ಪಂ ಅಧ್ಯಕ್ಷ ವಿ. ಪ್ರಸಾದ್ ಅವರು ಈ ಬಗ್ಗೆ ಖುದ್ದಾಗಿ ವಿಚಾರಣೆಗೆ ಹಾಜರಾಗಿ ಸ್ಪಷ್ಟನೆ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹುದ್ದೆಗೆ ವಿ.ಪ್ರಸಾದ್ ರಾಜೀನಾಮೆ ನೀಡಿದ ನಂತರ, ತಮ್ಮ ಪಕ್ಷದ ರಾಜಕೀಯ ಒತ್ತಡದಿಂದ ರಾಜೀನಾಮೆ ಸಲ್ಲಿಸಿರುವುದಾಗಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ ಎಂದು ಆರೋಪಿಸಿ ಭೀಮೇಶ್ ಸೇರಿದಂತೆ ಜಿಲ್ಲಾ ಪಂಚಾಯತ್ ನ ಆರು ಮಂದಿ ಸದಸ್ಯರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ವಿ.ಪ್ರಸಾದ್ ತಮ್ಮ ಪಕ್ಷದ ರಾಜಕೀಯ ಒತ್ತಡದಿಂದ ರಾಜೀನಾಮೆ ನೀಡಿದ್ದಾರೆ ಹೊರತು ಸ್ವಯಂ ಪ್ರೇರಣೆಯಿಂದ ಅಲ್ಲ. ಆ ಕುರಿತು ಸ್ವತಃ ಅವರೇ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ. ಜುಲೈ 19ರಂದು ರಾಜೀನಾಮೆ ಸಲ್ಲಿಸಿದ್ದು, ಅಂಗೀಕಾರಕ್ಕೆ ಗುರುವಾರವೇ ಕೊನೆ ದಿನ. ವಿ.ಪ್ರಸಾದ್ ಅಧ್ಯಕ್ಷರಾಗಲು ಅರ್ಜಿದಾರರು ಮತ ಹಾಕಿದ್ದರು. ಇದೀಗ ಪಕ್ಷವು ಅವರ ಮೇಲೆ ಒತ್ತಡ ಹಾಕಿ ಬಲವಂತದಿಂದ ರಾಜೀನಾಮೆ ಪಡೆದಿರುವುದು ಸರಿಯಲ್ಲ. ಅಗತ್ಯವಿದ್ದರೆ ಪ್ರಸಾದ್ ಅವರನ್ನೇ ಕೋರ್ಟ್‌ಗೆ ಕರೆಯಿಸಿ ಹೇಳಿಕೆ ಪಡೆಯಬಹುದು ಎಂದರು.

ಇದನ್ನು ಆಕ್ಷೇಪಿಸಿದ ಸರಕಾರಿ ವಕೀಲರು, ರಾಜೀನಾಮೆ ಒತ್ತಡದಿಂದ ಸಲ್ಲಿಸಿದ್ದರೆ, ಅವರೇ ಹೈಕೋರ್ಟ್‌ಗೆ ಅರ್ಜಿ ಹಾಕಬೇಕು. ಬದಲಾಗಿ ಅವರಿಗೆ ಮತಹಾಕಿದವರು ಅರ್ಜಿ ಹಾಕುವುದರಲ್ಲಿ ಅರ್ಥವಿಲ್ಲ. ಇದೇನು ಸಾರ್ವಜನಿಕ ಹಿತಾಸಕ್ತಿ ವಿಚಾರವಲ್ಲ. ಮೇಲಾಗಿ ಪ್ರಸಾದ್ ರಾಜೀನಾಮೆ ನೀಡಲು ಯಾವುದೇ ಒತ್ತಡವಿರಲಿಲ್ಲ, ಸ್ವಯಂ ಪ್ರೇರಿತವಾಗಿಯೇ ರಾಜೀನಾಮೆ ನೀಡಿದ್ದಾರೆ ಎಂದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ಪ್ರಸಾದ್ ಅವರೇ ಕೋರ್ಟ್‌ಗೆ ಹಾಜರಾಗಿ ಜಿ.ಪಂ ಅಧ್ಯಕ್ಷ ಹುದ್ದೆಗೆ ಏಕೆ ರಾಜೀನಾಮೆ ನೀಡಲಾಗಿದೆ? ಎಂಬುದನ್ನು ಸ್ಪಷ್ಟಪಡಿಸಲಿ. ಅದಕ್ಕಾಗಿ ಶುಕ್ರವಾರ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿ, ಅವರಿಗೆ ಸಮನ್ಸ್ ಜಾರಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News