ವಾರಸುದಾರರಿಲ್ಲದ ಶವದ ಅಂತ್ಯಸಂಸ್ಕಾರ ನೆರವೆರಿಸಿದ ಪೊಲೀಸರು

Update: 2018-08-02 16:43 GMT

ಬೆಂಗಳೂರು, ಆ.2: ಶವವೊಂದರ ವಾರಸುದಾರರು ಪತ್ತೆಯಾಗದ ಕಾರಣ ಪೊಲೀಸರೇ ಸೇರಿ ಶವಕ್ಕೆ ಅಂತ್ಯಸಂಸ್ಕಾರ ನೆರವೇರಿಸುವ ಮೂಲಕ ನಗರದ ಬಾಗಲೂರು ಠಾಣಾ ಪೊಲೀಸರು ಹೃದಯವಂತಿಕೆ ತೋರಿದ್ದಾರೆ.

ಜುಲೈ ತಿಂಗಳಿನಲ್ಲಿ ಬಾಗಲೂರು ಠಾಣಾ ವ್ಯಾಪ್ತಿಯ ಕೆಐಬಿ ಕಂಪೆನಿಯೊಂದರ ಬಳಿ ಅಪರಿಚಿತ ಯುವಕ ಏಕಾಏಕಿ ಕುಸಿದು ಬಿದ್ದು, ಪ್ರಜ್ಞೆ ಕಳೆದುಕೊಂಡಿದ್ದ. ಇದನ್ನು ಕಂಡ ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದರು. ಈ ಸಂಬಂಧ ಬಾಗಲೂರು ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಆಸ್ಪತ್ರೆಯಲ್ಲಿ ಅಪರಿಚಿತ ಯುವಕ ಚಿಕಿತ್ಸೆ ನೀಡಿದರೂ ಸುಧಾರಣೆ ಕಂಡು ಬಂದಿರಲಿಲ್ಲ. ಇನ್ನೊಂದು ಕಡೆ ಯುವಕನ ಪೋಷಕರ ಅಥವಾ ಸಂಬಂಧಿಕರ ಬಗ್ಗೆ ಯಾವುದೇ ಸುಳಿವು ಸಹ ಪೊಲೀಸರಿಗೆ ದೊರೆತಿರಲಿಲ್ಲ . ಈತನ ಗುರುತು ಹಿಡಿಯಲು ರಾಜ್ಯ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿಯೂ ಮಾಹಿತಿ ರವಾನಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಯುವಕನ ಪೋಷಕರು ಪತ್ತೆ ಆಗದ ಹಿನ್ನೆಲೆಯಲ್ಲಿ ಪೊಲೀಸರು ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋಸಾ ಹ್ಯುಮಾನಿಟಿ ಆಸ್ಪತ್ರೆಗೆ ಸೇರಿಸಿದ್ದರು. ಇಲ್ಲಿ ಅನಾಥರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಾರಣದಿಂದಲೇ ಅಪರಿಚಿತ ವ್ಯಕ್ತಿಗೆ ಬನಶಂಕರ ಎಂದು ಹೆಸರು ನಾಮಕರಣ ಮಾಡಿ, ಚಿಕಿತ್ಸೆ ಮುಂದುವರೆಸಿದ್ದರು.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಕಳೆದ ಜು.27ರಂದು ಮೃತಪಟ್ಟಿದ್ದ. ಈ ಸಂಬಂಧ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಶವದ ವಾರಸುದಾರರು ಕಂಡು ಬರದ ಹಿನ್ನೆಲೆಯಲ್ಲಿ ಬಾಗಲೂರು ಎಸ್ಸೈ ಬಿ.ಎಸ್. ನಂದಕುಮಾರ್ ನೇತೃತ್ವದಲ್ಲಿ ಎಎಸ್ಸೈ ಪ್ರಭಾಕರ್ ಹಾಗೂ ಇನ್ನಿತರ ಸಿಬ್ಬಂದಿ ಬಾಗಲೂರು ಬಳಿಯ ಸ್ಮಶಾನದಲ್ಲಿ ಜು.31ರಂದು ಮಣ್ಣು ಮಾಡಿ ಸಾರ್ಥಕತೆ ಮೆರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News