ಕನಿಷ್ಠ ಬೆಂಬಲ ಬೆಲೆ ಹೆಚ್ಚಳವೆಂಬ ಮತ್ತೊಂದು ಮೋಸ

Update: 2018-08-02 18:33 GMT

ಮೋದಿ ಸರಕಾರವು ಖಾರಿಫ್ ಬೆಳೆಗಳಿಗೆ ಹೆಚ್ಚಿಸಿರುವ ಕನಿಷ್ಠ ಬೆಂಬಲ ಬೆಲೆಯು ರೈತರ ಬಿಕ್ಕಟ್ಟಿನ ನಿವಾರಣೆಯ ಹೆಸರಿನಲ್ಲಿ ತೆಗೆದುಕೊಂಡಿರುವ ಬಾಯುಪಚಾರದ ಕ್ರಮವಷ್ಟೇ ಆಗಿದೆ.


ಭಾರತದಲ್ಲಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನೀಡುವ ವಿಷಯವನ್ನು ಚುನಾವಣೆಗಳಲ್ಲಿ ಓಟು ಪಡೆದುಕೊಳ್ಳುವ ಸಾಧನವನ್ನಾಗಿ ಮಾಡಿಕೊಳ್ಳಲಾಗಿದೆ. 2019ರ ಖಾರಿಫ್ ಹಂಗಾಮಿನ ಬೆಳೆಗಳಿಗೆ ಕೇಂದ್ರ ಸರಕಾರ ಘೋಷಿಸಿರುವ ಎಂಎಸ್‌ಪಿಯೂ ಸಹ ಇದೇ ಸಾಲಿಗೆ ಸೇರಿಕೊಳ್ಳುತ್ತದೆ. ಚುನಾವಣೆಗೆ ಮುನ್ನ ಕೃಷಿ ಉತ್ನನ್ನಗಳ ಉತ್ಪಾದಕ ವೆಚ್ಚದ ಮೇಲೆ ಒಂದೂವರೆ ಪಟ್ಟಿನಷ್ಟು ಎಂಎಸ್‌ಪಿಯನ್ನು ನಿಗದಿ ಮಾಡುವುದಾಗಿ ಹೇಳಿದ್ದ ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇ ಬೇರೆ. ಅಂತಹ ಕ್ರಮಗಳಿಂದ ‘ಮಾರುಕಟ್ಟೆಯ ವಿದ್ಯಮಾನಗಳಲ್ಲಿ ಹಸ್ತಕ್ಷೇಪ’ ಮಾಡಿದಂತಾಗುತ್ತದೆ ಹಾಗೂ ‘ವ್ಯತಿರಿಕ್ತ ಪರಿಣಾಮಗಳನ್ನುಂಟು ಮಾಡಬಹುದೆಂಬ’ ನೆಪವೊಡ್ಡಿ ತಾನೇ ಕೊಟ್ಟ ಭರವಸೆಗಳಿಂದ ಬಿಜೆಪಿ ಸರಕಾರವು ಹಿಂದೆ ಸರಿಯಿತು. ಆದರೆ ಬರಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉಲ್ಟಾ ಹೊಡೆದ ಕೇಂದ್ರ ಸರಕಾರ ಇದೀಗ ಎಂಎಸ್‌ಪಿ ಪ್ರಮಾಣದಲ್ಲಿ ಹಿಂದಿನ ಯಾವುದೇ ಸರಕಾರಗಳು ಮಾಡದಿರುವಷ್ಟು ಐತಿಹಾಸಿಕ ಹೆಚ್ಚಳವನ್ನು ಮಾಡಲಾಗಿದೆೆ ಎಂದು ಕೊಚ್ಚಿಕೊಳ್ಳುತ್ತಿದೆ.

ಆದರೆ ವಾಸ್ತವದಲ್ಲಿ ಕೇಂದ್ರ ಸರಕಾರ ಮಾಡಿರುವ ಹೆಚ್ಚಳದಲ್ಲಿ ಅಂತಹ ಐತಿಹಾಸಿಕವಾದದ್ದು ಏನೂ ಇಲ್ಲ. ರಾಗಿ ಬೆಳೆಯೊಂದನ್ನು ಹೊರತುಪಡಿಸಿದರೆ ಈ ಸರಕಾರ ಇತರ ಬೆಳೆಗಳಿಗೆ ಘೋಷಿಸಿರುವ ಎಂಎಸ್‌ಪಿಯು, ಈ ಹಿಂದಿನ ಯುಪಿಎ ಸರಕಾರವು ಪ್ರತಿವರ್ಷ ಮಾಡುತ್ತಿದ್ದ ವಾರ್ಷಿಕ ಹೆಚ್ಚಳಕ್ಕಿಂತ ಕಡಿಮೆಯೇ ಇದೆ. ಹಾಗೆ ನೋಡಿದರೆ ಸರಕಾರವು ಈ ಘೋಷಣೆಯನ್ನು ಮಾಡುವುದಕ್ಕೆ ಮುಂಚೆಯೇ 2017-18ರ ಸಾಲಿನಲ್ಲಿ ತೊಗರಿ, ಜೋಳ, ಉದ್ದು ಮತ್ತು ಭತ್ತದಂಥ ಕೆಲವು ಖಾರಿಫ್ ಬೆಳೆಗಳಿಗೆ ಅವುಗಳ ಉತ್ಪಾದನಾ ವೆಚ್ಚ ಹಾಗೂ ಕೌಟುಂಬಿಕ ಶ್ರಮದ ಒಟ್ಟು ಮೊತ್ತದ ಮೇಲೆ ಶೇ.50 ರಷ್ಟು ಅಧಿಕಾಂಶದಷ್ಟು ಎಂಎಸ್‌ಪಿ (ಎ2+ಎಫ್‌ಎಲ್) ಕೊಡಲಾಗುತ್ತಿತ್ತು.

ಆದರೆ ಈ ಬಾಬತ್ತಿನಲ್ಲಿ ಅತ್ಯಂತ ಚಿಂತೆಗೀಡುಮಾಡುವ ಅಂಶವೆಂದರೆ ಈ ಕನಿಷ್ಠ ಬೆಂಬಲ ಬೆಲೆಗಳನ್ನು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ದಕ್ಕುವುದರಲ್ಲಿ ಎದುರಾಗುವ ಅನುಷ್ಠಾನದ ಸಮಸ್ಯೆಗಳು. ದೇಶದ ಹಲವು ಭಾಗಗಳಲ್ಲಿ ಘಟಿಸಿರುವ ವಿದ್ಯಮಾನಗಳು ಎತ್ತಿ ತೋರಿಸುವಂತೆ 2017-18ರ ಸಾಲಿನಲ್ಲಿ ಹಲವು ಪ್ರಮುಖ ಖಾರಿಫ್ ಬೆಳೆಗಳ ಮಾರುಕಟ್ಟೆ ದರಗಳು ಘೋಷಿತ ಎಂಎಸ್‌ಪಿಗಿಂತ ಸಾಕಷ್ಟು ಕಡಿಮೆ ಮಟ್ಟಕ್ಕೆ ಕುಸಿದಿದ್ದವು.

ಉದಾಹರಣೆಗೆ ಮಹಾರಾಷ್ಟ್ರದಲ್ಲಿ ತೊಗರಿಗೆ ಕ್ವಿಂಟಾಲಿಗೆ ರೂ. 5,450ರಷ್ಟು ಎಂಎಸ್‌ಪಿಯನ್ನು ಘೋಷಿಸಲಾಗಿದ್ದರೂ ಮಾರುಕಟ್ಟೆಯಲ್ಲಿ ಅದರ ದರ ಇದಕ್ಕಿಂತ ಶೇ.20-25ರಷ್ಟು ಕಡಿಮೆ ಇತ್ತು. ಹಾಗೆಯೇ ಮಧ್ಯಪ್ರದೇಶದಲ್ಲಿ ಸೋಯಾಬೀನ್ ಗೆ 3,600 ರೂ. ಎಂಎಸ್‌ಪಿ ನಿಗದಿಯಾಗಿದ್ದರೂ ಮಾರುಕಟ್ಟೆಯಲ್ಲಿ ಶೇ.15ರಷ್ಟು ಬೆಲೆಯೇ ಚಲಾವಣೆಯಲ್ಲಿತ್ತು. ಹಾಗೆಯೇ ಉದ್ದಿಗೆ ಕ್ವಿಂಟಾಲಿಗೆ 5,400 ರೂ. ಎಂಎಸ್‌ಪಿ ನಿಗದಿಯಾಗಿದ್ದರೂ ಮಾರುಕಟ್ಟೆಲ್ಲಿ ಶೇ.52ರಷ್ಟು ಕಡಿಮೆ ಬೆಲೆಗೆ ರೈತರಿಂದ ಖರೀದಿಸಲಾಗುತ್ತಿತ್ತು. ಹೀಗಾಗಿ ಅನುಷ್ಠಾನಗೊಳಿಸಲಾಗದ ಎಂಎಸ್‌ಪಿ ದರವನ್ನು ಎಷ್ಟು ಹೆಚ್ಚಿಸಿದರೆ ತಾನೇ ಏನು ಪ್ರಯೋಜನ? ಸರಕಾರವು ಘೋಷಿಸುವ ಎಂಎಸ್‌ಪಿ ದರಕ್ಕೂ ಮಾರುಕಟ್ಟೆಯಲ್ಲಿ ರೈತರಿಗೆ ದಕ್ಕುವ ದರಕ್ಕೂ ನಡುವಿನ ಅಂತರವು ಹೆಚ್ಚುತ್ತಲೇ ಇರುವುದಕ್ಕೆ ಉತ್ಪಾದನೆ ವಿಸ್ತರಣೆ ನೀತಿ ಮತ್ತು ಕೃಷಿ ಮಾರುಕಟ್ಟೆ ನೀತಿಗಳ ನಡುವೆ ತಾಳಮೇಳವಿಲ್ಲದಿರುವುದೇ ಪ್ರಮುಖ ಕಾರಣವಾಗಿದೆ. ಎಂಎಸ್‌ಪಿಯ ಲೆಕ್ಕಾಚಾರಗಳಲ್ಲಿ ಬೆಳೆಗಳಿಗಿರುವ ಬೇಡಿಕೆಯ ಅಂಶವನ್ನು ಪರಿಗಣಿಸದೆ ಉತ್ಪಾದನೆಯ ವೆಚ್ಚವನ್ನು ಮಾತ್ರ ಪರಿಗಣಿಸುತ್ತಿರುವುದರಿಂದಲೂ ಈ ಪರಿಸ್ಥಿತಿ ಉದ್ಭವವಾಗುತ್ತಿದೆ. ಮಾರುಕಟ್ಟೆ ದರಗಳಿಗಿಂತ ಹೆಚ್ಚಿನ ಎಂಎಸ್‌ಪಿ ಲಭ್ಯವಾಗುವ ಬೆಳಗಳ ಉತ್ಪಾದನೆ ಅಸಾಧಾರಣವಾಗಿ ಹೆಚ್ಚಾಗಿಬಿಡುತ್ತದೆ. ಅದಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲದಿರುವಾಗ ಅಗತ್ಯಕ್ಕಿಂತ ಹೆಚ್ಚಿನ ಪೂರೈಕೆಯಾಗುವ ಸರಕುಗಳ ಬೆಲೆಗಳು ಮಾರುಕಟ್ಟೆಯಲ್ಲಿ ಎಂಎಸ್‌ಪಿಗಿಂತ ಸಾಕಷ್ಟು ಕಡಿಮೆ ಮಟ್ಟಕ್ಕೆ ಕುಸಿದುಬಿಡುತ್ತಿದೆ.

 ರೈತರು ಬೆಳೆದ ಬೆಳೆಗಳನ್ನು ಸರಕಾರವೇ ಖರೀದಿ ಮಾಡುವ ಮೂಲಕ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಒದಗಿಸುವ ಕ್ರಮವನ್ನು ಭಾರತದಲ್ಲಿ ಅನುಸರಿಸಲಾಗುತ್ತಿದೆ. ಆದರೆ ಹಾಗೆ ಸರಕಾರವು ಖರೀದಿಸುವ ಬೆಳೆಗಳು ಮತ್ತು ಅವುಗಳ ಪ್ರಮಾಣಗಳು ಸೀಮಿತವಾಗಿಯೇ ಇರುತ್ತವೆ. ಭತ್ತ ಮತ್ತು ಹತ್ತಿಯನ್ನು ಹೊರತುಪಡಿಸಿದರೆ ಎಂಎಸ್‌ಪಿಯನ್ನು ಪಡೆದುಕೊಳ್ಳುವ ಇತರ ಬೆಳೆಗಳನ್ನು ಕೊಂಡುಕೊಳ್ಳುವ ಸಮರ್ಪಕವಾದ ವ್ಯವಸ್ಥೆಯೇ ಸರಕಾರದಲ್ಲಿಲ್ಲ. ಉದಾಹರಣೆಗೆ 2017-18ರಲ್ಲಿ 11 ರಾಜ್ಯಗಳಲ್ಲಿ ಸರಕಾರವು ಎಂಎಸ್‌ಪಿ ದರದಲ್ಲಿ 45 ಬಗೆಯ ಧಾನ್ಯಗಳು ಮತ್ತು ಎಣ್ಣೆಕಾಳುಗಳನ್ನು ಖರೀದಿ ಮಾಡಬೇಕಿತ್ತು. ಆದರೆ ಅದರಲ್ಲಿ 30ಕ್ಕೂ ಹೆಚ್ಚುಬಗೆಯ ಕಾಳುಗಳ ಶೇ.10ರಷ್ಟನ್ನೂ ಸಹ ಸರಕಾರ ಖರೀದಿ ಮಾಡಲಿಲ್ಲ. ಹೀಗಾಗಿ ಕೃಷಿ ಉತ್ಪನ್ನಗಳ ಖರೀದಿ ಮತ್ತು ಮಾರುಕಟ್ಟೆಯ ಬಗ್ಗೆ ಸರಿಸಮಾನವಾದ ಬದಲಾವಣೆಗಳನ್ನು ತಂದುಕೊಳ್ಳದೆ ಕೇವಲ ಎಂಎಸ್‌ಪಿಯನ್ನು ಹೆಚ್ಚಿಸುವುದು ಮಾತ್ರ ರೈತರ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳುವ ಅರ್ಥಪೂರ್ಣ ಕ್ರಮವೇನೂ ಆಗುವುದಿಲ್ಲ. ಭಾರತದಲ್ಲಿ ಕೃಷಿ ಉತ್ಪನ್ನಗಳ ದರಗಳು ತೋರುವ ಏರುಪೇರುಗಳ ಕಾರಣವನ್ನು ಕೇವಲ ಉತ್ಪನ್ನದ ಹೆಚ್ಚಳವು ಉಂಟು ಮಾಡುವ ಆಘಾತಗಳಿಂದ ವಿವರಿಸಲಾಗುವುದಿಲ್ಲ. ಅರ್ಧಕ್ಕಿಂತ ಹೆಚ್ಚಿನ ಬೆಳೆಗಳ ಬೆಲೆಗಳು ನಿರ್ಧಾರಗೊಳ್ಳುವುದೇ ಕಟಾವಿನ ನಂತರದಲ್ಲಿ. ಬೆಲೆಗಳು ಏರುಪೇರಾಗುವುದಕ್ಕೆ ಮತ್ತೊಂದು ಪ್ರಮುಖ ಕಾರಣ ಇಲ್ಲಿದೆ. ಈ ಕಟಾವಿನ ನಂತರದ ಹಂತದಲ್ಲಿ ಮೌಲ್ಯ ಕೂಡಿಕೆಯ ಸರಣಿಯು ಮಧ್ಯವರ್ತಿಗಳ ಪ್ರವೇಶದಿಂದ ತುಂಡುತುಂಡಾಗುತ್ತದೆ. ಮಾರುಕಟ್ಟೆಯ ಕೊಂಡಿಗಳ ಸಂಪರ್ಕವು ಹೀಗೆ ತುಂಡಾಗಿಬಿಡುವುದರಿಂದ ಎಲ್ಲರಿಗೂ ಏಕಪ್ರಕಾರವಾದ ಬೆಲೆಗಳು ದೊರೆಯುವುದಿಲ್ಲ. ಈ ದೋಷವು ಈ ವಿದ್ಯಮಾನದಲ್ಲೇ ಅಂತರ್ಗತಗೊಂಡಿರುವ ವಾಸ್ತವ. ಈ ಮಧ್ಯವರ್ತಿಗಳು ಉತ್ಪಾದನೆಯ ಹೆಚ್ಚಳದ ಅಥವಾ ಅಭಾವದ ಪರಿಸ್ಥಿತಿಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡು ತಮ್ಮ ದಲ್ಲಾಳಿಯನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ರೈತರು ಮಾತ್ರ ಬಂಪರ್ ಬೆಳೆಯಾದರೂ ಸಹ ಕಡಿಮೆ ಬೆಲೆಯನ್ನು ಪಡೆದುಕೊಳ್ಳುತ್ತಿರುತ್ತಾರೆ. ಉದಾಹರಣೆಗೆ ಭಾರತದ ಅಕ್ಕಿ ಮಾರುಕಟ್ಟೆಯಲ್ಲಿ, ಬೆಲೆಯ ಶೇ.80ರಷ್ಟು ಭಾಗವು ವ್ಯಾಪಾರಿಯ ಲಾಭದ ಅಂಶವಾಗಿರುತ್ತದೆ. ಸರಕಾರವು ಭತ್ತಕ್ಕೆ ಎಂಎಸ್‌ಪಿಯನ್ನು ಹೆಚ್ಚಿಸಿದಾಗಲೆಲ್ಲಾ ವ್ಯಾಪಾರಿಯು ಸಹ ತನ್ನ ಲಾಭಾಂಶವನ್ನು ಹೆಚ್ಚಿಸಿಕೊಂಡು ಸರಕಾರವು ಮಾಡುವ ಖರೀದಿಗೆ ಪೈಪೋಟಿಯೊಡ್ಡುತ್ತಾನೆ.
ಎಂಎಸ್‌ಪಿಯು ರೈತರಿಗೆ ಲಾಭತರುತ್ತದೆಯೋ ಅಥವಾ ಕೃಷಿಯೇತರ ಪಾತ್ರಧಾರಿಗಳಾದ ವ್ಯಾಪಾರಿಗಳಿಗೆ ಲಾಭವನ್ನು ಒದಗಿಸುತ್ತದೆಯೋ ಎಂಬ ಅಂಶವನ್ನು ಆಯಾ ಕೃಷಿ ಮಾರುಕಟ್ಟೆಗಳ ಪೂರೈಕೆ-ಬೇಡಿಕೆಯ ವಿದ್ಯಮಾನವು ತೀರ್ಮಾನಿಸುತ್ತದೆ.

ಸಾಮಾನ್ಯವಾಗಿ ಭಾರತದ ರೈತರು ಖಟಾವಾದ ತಕ್ಷಣ ತಮ್ಮ ಉತ್ಪನ್ನವನ್ನು ಮಾರಿಬಿಡುವ ಒತ್ತಡದಲ್ಲಿರುತ್ತಾರೆ. ಇದರಿಂದಾಗಿ ಬೆಲೆಯು ಹೆಚ್ಚಾಗುವ ತನಕ ಕಾದು ಮಾರುವ ಅವಕಾಶವನ್ನು ರೈತಾಪಿ ಕಳೆದುಕೊಳ್ಳುತ್ತಾರೆ. ಆದರೆ ವ್ಯಾಪಾರಿಗಳು ಮಾತ್ರ ತಮಗೆ ಸರಿಯೆನಿಸುವ ಸಮಯ ಬರುವವರೆಗೆ ಕಾದು ಕೊಂಡುಕೊಳ್ಳುವಷ್ಟು ಸೌಲಭ್ಯವನ್ನು ಹೊಂದಿರುತ್ತಾರೆ. ಇದಲ್ಲದೆ, ನಿರ್ದಿಷ್ಟ ಬೆಳೆ ಮತ್ತು ಪ್ರದೇಶಗಳಿಗೆ ಸರಿ ಹೊಂದುವ ವಿಭಿನ್ನ ಮಾರುಕಟ್ಟೆ ಕ್ರಮಗಳು ಇಲ್ಲದಿರುವುದರಿಂದ ಸಮಯಕ್ಕೆ ಸರಿಯಾಗಿ ಎಂಎಸ್‌ಪಿ ಲಭ್ಯವಾಗುವುದಿಲ್ಲ ಮತ್ತು ಖರೀದಿಯ ಪ್ರಮಾಣದಲ್ಲಿರುವ ದಾಸ್ತಾನು ಮಿತಿಗಳಿಂದಾಗಿ ಉತ್ಪನ್ನಗಳ ಬೆಲೆಗಳು ಕುಸಿಯುವ ಅಪಾಯವಿರುತ್ತದೆ. ಇದರ ಸಂಪೂರ್ಣ ಲಾಭವನ್ನು ವ್ಯಾಪಾರಿಗಳು ಪಡೆದುಕೊಳ್ಳುತ್ತಾರೆ. ಹೀಗಾಗಿ ಎಂಎಸ್‌ಪಿ ದರಗಳು ಹುಟ್ಟುಹಾಕುವ ವೈಪರೀತ್ಯಗಳು ರೈತರಿಗೆ ವಿನಾಶವನ್ನೇ ತರಬಹುದು.

ಅದರಲ್ಲೂ ತಮ್ಮ ಬೆಳೆಗಳನ್ನು ಹೊಲದಲ್ಲೇ ಸಗಟು ಖರೀದಿದಾರರಿಗೆ ಇಡಿಯಾಗಿ ಮಾರಾಟಮಾಡುವ ಸಣ್ಣ ಮತ್ತು ಅತಿ ಸಣ್ಣ ರೈತಾಪಿಯ ಮೇಲೆ ಇದರ ಪ್ರಭಾವ ಇನ್ನೂ ತೀವ್ರವಾಗಿರುತ್ತದೆ. ಎಂಎಸ್‌ಪಿಯಂತಹ ಯೋಜನೆಗಳು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಲುಪುವುದೇ ಇಲ್ಲವಾದ್ದರಿಂದ ಮಾರುಕಟ್ಟೆಯಲ್ಲಿ ಕುಸಿಯುವ ಬೆಲೆಗಳಿಂದ ಅವರು ತೀವ್ರವಾದ ಆಘಾತಕ್ಕೆ ಗುರಿಯಾಗುತ್ತಾರೆ. ಧಾನ್ಯಗಳ ದಾಸ್ತಾನು ಮತ್ತು ಆಹಾರ ಸಂಸ್ಕರಣೆಯಂತಹ ಮಾರುಕಟ್ಟೆ ಸಂಬಂಧೀ ಮೂಲ ಸೌಕರ್ಯಗಳ ಮೇಲೆ ದೊಡ್ಡ ಹೂಡಿಕೆಯನ್ನು ಮಾಡದೆ ಮತ್ತು 2003ರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾಯ್ದೆಗೆ ತಿದ್ದುಪಡಿ ಮಾಡಿ ಹಳೆಯ ಕಾಲದ ಮಂಡಿ ವ್ಯವಸ್ಥೆಯ ಬದಲಿಗೆ ರೈತ ಒಕ್ಕೂಟಗಳಿಂದಲೇ ನೇರವಾಗಿ ಖರೀದಿ ಮಾಡುವ ವ್ಯವಸ್ಥೆಯನ್ನು ಚಾಲ್ತಿಗೆ ತರದೇ ಕೇವಲ ಎಂಎಸ್‌ಪಿಯನ್ನು ಹೆಚ್ಚಿಸುವುದರಿಂದ ಅತಂತ್ರದಲ್ಲಿರುವ ರೈತರಿಗೆ ಯಾವುದೇ ಉಪಯೋಗವಿಲ್ಲ.

ಕೃಪೆ: Economic and Political Weekly

Writer - ಅನು: ಶಿವಸುಂದರ್

contributor

Editor - ಅನು: ಶಿವಸುಂದರ್

contributor

Similar News