ವೈಜ್ಞಾನಿಕ ಮನೋಭಾವದ ಮೇಲೆ ದಾಳಿ: ರಾಷ್ಟ್ರಪತಿಗೆ ವಿಜ್ಞಾನಿಗಳ ದೂರು

Update: 2018-08-03 03:57 GMT

ಚೆನ್ನೈ, ಆ.3: ದೇಶದಲ್ಲಿ ವೈಜ್ಞಾನಿಕ ಸಂಸ್ಥೆಗಳಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದ್ದು, ವೈಜ್ಞಾನಿಕ ಮನೋಭಾವದ ಮೇಲೆ ಸರಣಿ ದಾಳಿಗಳು ನಡೆಯುತ್ತಿವೆ ಎಂದು ಹಿರಿಯ ವಿಜ್ಞಾನಿಗಳ ತಂಡ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ದೂರು ನೀಡಿದೆ.

ಈ ಸಂಬಂಧ ರಾಷ್ಟ್ರಪತಿಗೆ ಪತ್ರ ಬರೆದಿರುವ ವಿಜ್ಞಾನಿಗಳು, ಇಸ್ರೋ ವಿಜ್ಞಾನಿ ತಪನ್ ಮಿಶ್ರಾ ಅವರ ವರ್ಗಾವಣೆಯನ್ನು ವಿರೋಧಿಸಿದ್ದಾರೆ. ಅಹ್ಮದಾಬಾದ್‌ನ ಬಾಹ್ಯಾಕಾಶ ಅನ್ವಯಿಕೆಗಳ ಕೇಂದ್ರದ ನಿರ್ದೇಶಕರಾಗಿದ್ದ ಅವರನ್ನು ಜುಲೈ 19ರಂದು ಬೆಂಗಳೂರಿನಲ್ಲಿ ಇಸ್ರೊ ಅಧ್ಯಕ್ಷರ ಹಿರಿಯ ಸಲಹೆಗಾರರಾಗಿ ವರ್ಗಾಯಿಸಲಾಗಿತ್ತು.

28 ವಿಜ್ಞಾನಿಗಳು ಈ ಪತ್ರಕ್ಕೆ ಸಹಿ ಮಾಡಿದ್ದು, ರಾಷ್ಟ್ರಪತಿ ಮಧ್ಯಪ್ರವೇಶಿಸಿ, ತಪನ್ ಅವರ "ದುರುದ್ದೇಶಪೂರ್ವಕ ಮತ್ತು ರಾಜಕೀಯಪ್ರೇರಿತ" ವರ್ಗಾವಣೆ ಬಗೆಗಿನ ವರದಿಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ಸರ್ಕಾರಿ ಅಧಿಕಾರಿಗಳು ಅಥವಾ ತಪನ್ ಮಿಶ್ರಾ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

"ಇಸ್ರೋ, ಅಣುವಿದ್ಯುತ್ ಆಯೋಗ, ಸಿಎಸ್‌ಐಆರ್, ಡಿಆರ್‌ಡಿಒ ಮತ್ತು ಐಎಆರ್‌ಐನಂಥ ಸಂಸ್ಥೆಗಳು ದೇಶಕಟ್ಟಲು ಗಣನೀಯ ಕೊಡುಗೆ ನೀಡಿವೆ. ಆದರೆ ಅವುಗಳನ್ನು ಈಗ ರಾಜಕೀಯ ಹಸ್ತಕ್ಷೇಪ ಮತ್ತು ತಿರುಚುವಿಕೆ ಮೂಲಕ ಸಂಕುಚಿತ ಮತ್ತು ಕುಗ್ಗಿಸಿ, ಬೇರ್ಪಡಿಸಲಾಗುತ್ತಿದೆ" ಎಂದು ವಿಜ್ಞಾನಿಗಳು ಗಂಭೀರ ಆರೋಪ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಸಂಸ್ಥೆಗಳ ಮೇಲೆ ಹಸ್ತಕ್ಷೇಪ ಮಾತ್ರವಲ್ಲದೇ, ವೈಜ್ಞಾನಿಕ ಮನೋಭಾವದ ಮೇಲೆ ಕೂಡಾ ಸುಸ್ಥಿರ ದಾಳಿಗಳು ನಿರಂತರವಾಗಿ ನಡೆಯುತ್ತಿವೆ ಎಂದು ಪತ್ರದಲ್ಲಿ ಆಪಾದಿಸಲಾಗಿದೆ.

ಹಸ್ತಕ್ಷೇಪದ ಕ್ರಮ, ದಂಡನಾಕ್ರಮಗಳು ಹಾಗೂ ದುರುದ್ದೇಶಪೂರ್ವಕ ನೇಮಕಾತಿಗಳು ಇಂಥ ಸಂಸ್ಥೆಗಳಲ್ಲಿ ದ್ವೇಷಪೂರ್ವಕ ವಾತಾವರಣಕ್ಕೆ ಕಾರಣವಾಗಿದ್ದು, ಇದು ದೇಶದ ಪ್ರಗತಿಗೆ ಮಾರಕ ಎಂದು ಬಣ್ಣಿಸಿದ್ದಾರೆ.

"ರಾಷ್ಟ್ರಪತಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮದು. ದೇಶದಲ್ಲಿ ವಿಜ್ಞಾನ ಉಳಿದುಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ರಾಷ್ಟ್ರದ ಅತ್ಯುನ್ನತ ಹುದ್ದೆಯಲ್ಲಿರುವವರು ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಸಿಎಸ್‌ಐಆರ್‌ನ ಮಾಜಿ ಮುಖ್ಯ ವಿಜ್ಞಾನಿ ಹಾಗೂ ಪತ್ರಕ್ಕೆ ಸಹಿ ಮಾಡಿರುವ ವಿಜ್ಞಾನಿಗಳಲ್ಲೊಬ್ಬರಾದ ಗೌಹರ್ ರಝಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News