ವಿಲೀನದತ್ತ ಕೇರಳ ಕಾಂಗ್ರೆಸ್ ಬಣಗಳು?

Update: 2018-08-03 11:40 GMT

 ತಿರುವನಂತಪುರಂ,ಆ.3: ಕೇರಳದ ಕಾಂಗ್ರೆಸ್‍ ಬಣಗಳ ಮರು ಏಕೀಕರಣದ ಕುರಿತ  ಚರ್ಚೆಗಳು ಪುನಃ ಸಕ್ರಿಯಗೊಂಡಿದೆ. ಕೊಟ್ಟಾಯಂನಲ್ಲಿ ನಿನ್ನೆ ನಡೆದ ಪಿಟಿ ಚಾಕೊ ಅನುಸ್ಮರಣೆ ಸಭೆಯಲ್ಲಿ ಪಾಲ್ಗೊಂಡಿದ್ದ ನಾಯಕರು ಕೇರಳದ ಕಾಂಗ್ರೆಸ್‍ಗಳು ಬಣ ರಾಜಕೀಯ ತೊರೆದು  ಒಟ್ಟುಗೂಡಬೇಕೆಂಬ ನಿಲುವು ವ್ಯಕ್ತಪಡಿಸಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಾಗಿರುವುದರಿಂದ ಈ ಚರ್ಚೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.

ಮೂರು ಮೃತ್ರಿಕೂಟಗಳಲ್ಲಿ ಕೇರಳ ಕಾಂಗ್ರೆಸ್ ಹರಡಿಕೊಂಡಿದೆ. ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಒಟ್ಟುಗೂಡಬೇಕಾದ ಅನಿವಾರ್ಯತೆಯನ್ನು ಪಕ್ಷದ ನಾಯಕರು ವ್ಯಕ್ತಪಡಿಸಿದ್ದಾರೆ. ಪಿ.ಟಿ. ಚಾಕೊ ಅನುಸ್ಮರಣೆ ಕಾರ್ಯಕ್ರಮದಲ್ಲಿ ನಾಯಕರೆಲ್ಲ ಈ ಅಗತ್ಯವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ್ದಾರೆ. ಕೇರಳ ಕಾಂಗ್ರೆಸ್‍ಗಳ ವಿಲೀನ ಸಾಧ್ಯತೆಗಳು ಹೆಚ್ಚು ದಟ್ಟವಾಗಿವೆ ಎಂದು ಪಿ.ಸಿ. ಥಾಮಸ್ ಚರ್ಚೆಗೆ ಚಾಲನೆ ನೀಡಿದ್ದಾರೆ.

ಸಂದಿಗ್ಧತೆಗಳನ್ನೆಲ್ಲ ಮೀರಿ ಒಂದಾಗಿ ನಿಂತರೆ ಭಾರತದ ರಾಜಕೀಯದಲ್ಲಿ ಕೇರಳ ಕಾಂಗ್ರೆಸ್ ಪ್ರಾಮುಖ್ಯ ಪಡೆದುಕೊಳ್ಳಲಿದೆ ಎಂದು ಕೆಎಂ ಮಾಣಿ ಹೇಳಿದರು. ಎಲ್‍ಡಿಎಫ್‍ನೊಂದಿಗೆ ಇರುವ ಫ್ರಾನ್ಸಿಸ್ ಜಾರ್ಜ್ ಕೂಡಾ ಇದೇ ನಿಲುವನ್ನು ವ್ಯಕ್ತಪಡಿಸಿದರು. ವಿಲೀನಕ್ಕೆ ಕೆ.ಎಂ. ಮಾಣಿ ನೇತೃತ್ವ ವಹಿಸಬೇಕೆಂದು  ಜೋನಿ ನೆಲ್ಲೂರ್ ಹೇಳಿದರು.

 ಕೇರಳ ಕಾಂಗ್ರೆಸ್‍ನ ಇನ್ನೊಂದು ಬಣದ ನಾಯಕ ಬಾಲಕೃಷ್ಣ ಪಿಳ್ಳೆಯವರ ನಿಲುವನ್ನು ಇನ್ನು ತಿಳಿಯಬೇಕಾಗಿದೆ. ಆದರೆ ಕೇರಳ ಕಾಂಗ್ರೆಸ್‍ಗಳನ್ನು ವಿಸರ್ಜಿಸಬೇಕೆಂದು ಪಿಸಿ ಜಾರ್ಜ್ ಹೇಳಿದರು. ಲೋಕಸಭೆ ಚುನಾವಣೆ ಹತ್ತಿರದಲ್ಲಿರುವುದರಿಂದ ವಿಲೀನ ಚರ್ಚೆ ಮತ್ತೆ ಕಾವೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News