ಆಕ್ಷೇಪವನ್ನು ಎತ್ತುವಂತೆ ವಿದೇಶಾಂಗ ಸಚಿವಾಲಯಕ್ಕೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸೂಚನೆ

Update: 2018-08-03 15:18 GMT

ಹೊಸದಿಲ್ಲಿ,ಆ.3: ಟಾಮ್ ಕ್ರೂಸ್ ಅಭಿನಯದ ಹಾಲಿವುಡ್ ಚಿತ್ರ ‘ಮಿಷನ್ ಕಾಶ್ಮೀರ-ಫಾಲ್‌ಔಟ್’ನಲ್ಲಿ ಜಮ್ಮು-ಕಾಶ್ಮೀರದ ತಪ್ಪು ನಿರೂಪಣೆಯ ವಿರುದ್ಧ ಆಕ್ಷೇಪಗಳನ್ನೆತ್ತುವಂತೆ ವಾರ್ತಾ ಮತ್ತು ಪ್ರಸಾರ(ಐಬಿ) ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸೂಚಿಸಿದೆ.

ಚಿತ್ರದ ಭಾರತೀಯ ಆವೃತ್ತಿಯು ದೇಶದ ಸಾರ್ವಭೌಮತೆ ಮತ್ತು ಅಖಂಡತೆಯನ್ನು ಉಲ್ಲಂಘಿಸಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲಾಗಿದೆಯಾದರೂ,ಜಾಗತಿಕ ಆವೃತ್ತಿಯಲ್ಲಿ ಭಾರತದ ಅಖಂಡ ಭಾಗದ ತಪ್ಪು ನಿರೂಪಣೆಯು ಈಗಲೂ ಇರುವ ಆತಂಕವಿದೆ ಎಂದು ಐಬಿ ಸಚಿವಾಲಯವು ತನ್ನ ಪತ್ರದಲ್ಲಿ ತಿಳಿಸಿದೆ.

ಭಾರತದಲ್ಲಿ ಜು.27ರಂದು ಬಿಡುಗಡೆಗೊಂಡಿರುವ ಚಿತ್ರದ ಭಾರತೀಯ ಆವೃತ್ತಿಯಲ್ಲಿ ‘ಭಾರತ ನಿಯಂತ್ರಿತ ಕಾಶ್ಮೀರ’ ಶಬ್ದವನ್ನು ತೆಗೆದುಹಾಕುವುದು ಸೇರಿದಂತೆ ನಾಲ್ಕು ಕಡಿತಗಳು/ಪರಿಷ್ಕರಣೆಗಳನ್ನು ಕೇಂದ್ರ ಸೆನ್ಸಾರ್ ಮಂಡಳಿ(ಸಿಬಿಎಫ್‌ಸಿ)ಯು ಸೂಚಿಸಿತ್ತು. ಅಲ್ಲದೆ ಜಮ್ಮು-ಕಾಶ್ಮೀರದ ಗಡಿಗಳನ್ನು ತಪ್ಪಾಗಿ ನಿರೂಪಿಸಿರುವ ನಕಾಶೆಗಳನ್ನೂ ಚಿತ್ರದಿಂದ ತೆಗೆಯುವಂತೆ ಸಿಬಿಎಫ್‌ಸಿ ಚಿತ್ರದ ನಿರ್ಮಾಪಕರಿಗೆ ತಾಕೀತು ಮಾಡಿತ್ತು.

ವಿದೇಶಾಂಗ ಸಚಿವಾಲಯವು ಯಾರ ಬಳಿ ಆಕ್ಷೇಪಗಳನ್ನು ಎತ್ತಬೇಕು ಎನ್ನುವುದನ್ನು ಐಬಿ ಸಚಿವಾಲಯದ ಪತ್ರದಲ್ಲಿ ನಿರ್ದಿಷ್ಟವಾಗಿ ತಿಳಿಸಿಲ್ಲವಾದರೂ,ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾಮಾನ್ಯವಾಗಿ ಇಂತಹ ವಿಷಯಗಳನ್ನು ಸಂಬಂಧಿತ ರಾಷ್ಟ್ರಗಳೊಂದಿಗೆ ಕೈಗೆತ್ತಿಕೊಳ್ಳುತ್ತದೆ. ಪ್ರಸಕ್ತ ಪ್ರಕರಣದಲ್ಲಿ ಚಿತ್ರವು ಅಮೆರಿಕದಲ್ಲಿ ನಿರ್ಮಾಣಗೊಂಡಿದ್ದರೆ,ಅದರ ನಿರ್ಮಾಪಕರೋರ್ವರ ಮಾತೃಸಂಸ್ಥೆ ನೆದರ್‌ಲ್ಯಾಂಡ್ಸ್‌ನಲ್ಲಿದೆ.

ಭಾರತದ ಗಡಿಗಳ ಸಮಗ್ರತೆಯೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ,ಹೀಗಾಗಿ ಚಿತ್ರದಲ್ಲಿಯ ಕಾಶ್ಮೀರ ಉಲ್ಲೇಖಗಳನ್ನು ಸರಿಪಡಿಸುವಂತೆ ಅಥವಾ ತೆಗೆಯುವಂತೆ ಕಳೆದ ವಾರ ನಿರ್ಮಾಪಕರಿಗೆ ಸೂಚಿಸಲಾಗಿತ್ತು ಎಂದು ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ ಜೋಶಿ ಅವರು ತಿಳಿಸಿದರು.

ಐಬಿ ಸಚಿವಾಲಯದ ಜು.26ರ ಪತ್ರಕ್ಕೆ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚಿತ್ರವನ್ನು ನಿರ್ಮಿಸಿರುವ ಕಂಪನಿ ಮತ್ತು ಅದು ನೋಂದಾಯಿಸಲ್ಪಟ್ಟಿರುವ ದೇಶದ ವಿವರಗಳನ್ನು ಕೇಳಿತ್ತು ಮತ್ತು ಈ ವಿವರಗಳನ್ನು ಶುಕ್ರವಾರ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News