ನಗರ ಸ್ಥಳೀಯ ಸಂಸ್ಥೆಗಳ ಮೀಸಲು ನಿಗದಿಗೆ ಅಧಿಸೂಚನೆ ಹೊರಡಿಸಿ: ಹೈಕೋರ್ಟ್ ಸೂಚನೆ

Update: 2018-08-03 16:10 GMT

ಬೆಂಗಳೂರು, ಆ.3: ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆಗಳ ಮೇಯರ್, ಉಪಮೇಯರ್ ಸ್ಥಾನಗಳಿಗೆ ಆ.13ರೊಳಗೆ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರಕಾರಕ್ಕೆ ಹೈಕೋರ್ಟ್ ಮೌಖಿಕ ಸೂಚನೆ ನೀಡಿದೆ.

ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮೀಸಲು ಪಟ್ಟಿ ಪ್ರಕಟಿಸದ ಸರಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಪೀಠದಲ್ಲಿ ಶುಕ್ರವಾರ ನಡೆಯಿತು.

ಚುನಾವಣಾ ಆಯೋಗದ ಪರ ವಕೀಲ ಕೆ.ಎನ್. ಫಣೀಂದ್ರ ವಾದಿಸಿ, ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ 105 ನಗರ ಸ್ಥಳೀಯ ಸಂಸ್ಥೆಗಳಿಗೆ ಈಗಾಗಲೇ ಸರಕಾರ ನೀಡಿರುವ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲು ಪಟ್ಟಿಯ ಅನುಸಾರ ವೇಳಾಪಟ್ಟಿ ಪ್ರಕಟಿಸಲಾಗಿದ್ದು, 7 ಮಹಾನಗರ ಪಾಲಿಕೆಗಳ ಮೀಸಲು ಪಟ್ಟಿ ಇನ್ನೂ ನಮ್ಮ ಕೈಸೇರಬೇಕಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಆದರೆ, ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೇಯರ್, ಉಪಮೇಯರ್ ಸ್ಥಾನಗಳಿಗೆ ಈವರೆಗೂ ಮೀಸಲು ನಿಗದಿಪಡಿಸಿಲ್ಲ. ಹೀಗಾಗಿ ಸರಕಾರ ಮೀಸಲು ನಿಗದಿಪಡಿಸಿ ಅಧಿಸೂಚನೆ ಹೊರಡಿಸುವವರೆಗೆ ಅರ್ಜಿ ಇತ್ಯರ್ಥಪಡಿಸದಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ವಿಚಾರಣೆ ವೇಳೆ ಹಾಜರಿದ್ದ ಸರಕಾರಿ ವಕೀಲರು, ಆ. 31ರ ವರೆಗೆ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಇದಕ್ಕೊಪ್ಪದ ನ್ಯಾಯಪೀಠ, ಅಷ್ಟು ಸಮಯ ನೀಡಲು ಸಾಧ್ಯವಿಲ್ಲ. ಅರ್ಜಿಯನ್ನು ಆ.13ರಂದು ವಿಚಾರಣೆಗೆ ನಿಗದಿಪಡಿಸುತ್ತೇವೆ. ಅಷ್ಟರಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಮೇಯರ್, ಉಪ ಮೇಯರ್ ಸ್ಥಾನಗಳಿಗೆ ಮೀಸಲು ನಿಗದಿಪಡಿಸಿ ಎಂದು ವೌಖಿಕ ಸೂಚನೆ ನೀಡಿ, ವಿಚಾರಣೆ ಮುಂದೂಡಿತು.
ವೇಳಾಪಟ್ಟಿ ಪ್ರಕಟಿಸದಂತೆ ಸೂಚನೆ : ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಗೆ ರಾಜ್ಯ ಸರಕಾರ ಪ್ರಕಟಿಸಿರುವ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಸಿರುವ ತಕರಾರು ಅರ್ಜಿಗಳ ವಿಚಾರಣೆಯನ್ನು ಶುಕ್ರವಾರ ಪೂರ್ಣಗೊಳಿಸಿದ ಹೈಕೋರ್ಟ್, ತೀರ್ಪು ಕಾಯ್ದಿರಿಸಿದೆ.

ಕಾಯ್ದಿರಿಸಲಾಗಿರುವ ತೀರ್ಪು ಪ್ರಕಟಿಸುವವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಹಾಗೂ ವಾರ್ಡ್ ಮರುವಿಂಗಡಣೆ ಪ್ರಶ್ನಿಸಲಾಗಿರುವ ತುಮಕೂರು ಮತ್ತು ಮೈಸೂರು ಮಹಾನಗರ ಪಾಲಿಕೆಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಪೀಠ ಮೌಖಿಕ ನಿರ್ದೇಶನ ನೀಡಿತು.

ತುಮಕೂರು ಹಾಗೂ ಮೈಸೂರು ಮಹಾನಗರ ಪಾಲಿಕೆಗಳ ವಾರ್ಡ್ ಮರುವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿತ್ತು. ಇದೀಗ, ಶಿವಮೊಗ್ಗ ಮಹಾನಗರ ಪಾಲಿಕೆಯ ಮೀಸಲು ಪಟ್ಟಿ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯೂ ಶುಕ್ರವಾರ ಪೂರ್ಣಗೊಂಡಿದ್ದು, ತೀರ್ಪು ಪ್ರಕಟಿಸುವವರೆಗೂ ಈ ಮೂರು ಮಹಾನಗರ ಪಾಲಿಕೆಗಳ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸದಂತೆ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News