ಮೆಹುಲ್ ಚೋಕ್ಸಿಯನ್ನು ಮೋದಿ ‘ಮೆಹುಲ್ ಭಾಯ್’ ಎನ್ನುವ ವಿಡಿಯೋ ಪೋಸ್ಟ್ ಮಾಡಿದ ರಾಹುಲ್

Update: 2018-08-04 09:48 GMT

ಹೊಸದಿಲ್ಲಿ, ಆ. 4: ಮುಂಬೈಯ ಪಾಸ್‌ಪೋರ್ಟ್ ಕಚೇರಿ ವಜ್ರೋದ್ಯಮಿ ಮೆಹುಲ್ ಚೊಕ್ಸಿಯ ಬಗ್ಗೆ ಯಾವುದೇ ವ್ಯತಿರಿಕ್ತ ವರದಿ ನೀಡಿಲ್ಲದ ಹಿನ್ನೆಲೆಯಲ್ಲಿ ಅವರಿಗೆ ಆಂಟಿಗುವಾ ಪೌರತ್ವ ನೀಡಲಾಗಿತ್ತು ಎಂದು ಅಲ್ಲಿನ ಸಿಐಯು ಅಥವಾ ಸಿಟಿಝನ್ ಶಿಪ್ ಬೈ ಇನ್ವೆಸ್ಟ್‌ಮೆಂಟ್ ಯುನಿಟ್ ಹೇಳಿರುವುದು ಭಾರತದಲ್ಲಿ ಮತ್ತೊಮ್ಮೆ ಆಡಳಿತ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

ಪಿಎನ್‌ಬಿ ಹಗರಣದಲ್ಲಿ ಆರೋಪಿಗಳಾಗಿರುವ ವಜ್ರೋದ್ಯಮಿಗಳಾದ ಮೆಹುಲ್ ಚೊಕ್ಸಿ ಮತ್ತಾತನ ಸೋದರಳಿಯ ನೀರವ್ ಮೋದಿಯನ್ನು ಭಾರತದಿಂದ ಪಲಾಯನಗೈಯ್ಯಲು ಕೇಂದ್ರ ಸಹಾಯ ಮಾಡಿದೆ ಎಂದು ಆಗಾಗ ಆರೋಪಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಈ ವಿಚಾರದಲ್ಲಿ ಪ್ರತಿಕ್ರಿಯಿಸಿ 2015ರಲ್ಲಿ ಚಿನ್ನದ ನಗದೀಕರಣ ಯೋಜನೆ ಜಾರಿ ಸಂಬಂಧದ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಹುಲ್ ಚೊಕ್ಸಿಯನ್ನು ‘ಮೆಹುಲ್ ಭಾಯಿ,’’ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

‘‘ಭಾರತವು ಮೆಹುಲ್ ‘ಭಾಯಿ’ ಚೊಕ್ಸಿ, ಮಿಸ್ಟರ್ 56ರ ಸೂಟ್ ಬೂಟ್ ಬಿಎಫ್‌ಎಫ್ ಗೆ ನವೆಂಬರ್ 2017ರಲ್ಲಿ ಕ್ಲೀನ್ ಚಿಟ್ ನೀಡಿ ಅವರಿಗೆ ಆಂಟಿಗುವಾ ಪೌರತ್ವ ದೊರೆಯುವಂತೆ ಮಾಡಿದೆ. ಈ ಭಾಯಿ ಭಾರತದಿಂದ ಪಲಾಯನಗೈಯ್ಯುವ ಮುನ್ನ ಪಿಎನ್‌ಬಿಯ ರೂ 13,000 ಕೋಟಿ ಲೂಟಿಗೈದಿದ್ದಾರೆ,’’ ಎಂದು ಟ್ವೀಟ್ ಮಾಡಿ ಮಿಸ್ಟರ್ 56 ಮೆಹುಲ್ ಭಾಯಿ ಜತೆಗಿರುವ ವೀಡಿಯೊ ಇಲ್ಲಿದೆ ಎಂದು ಬರೆದು ವೀಡಿಯೊ ಪೋಸ್ಟ್ ಮಾಡಿದ್ದಾರೆ ರಾಹುಲ್.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ, ವಜ್ರೋದ್ಯಮಿ ಚೊಕ್ಸಿಗೆ ಭಾರತದ ವಿಪಕ್ಷದ ದೊಡ್ಡ ನಾಯಕರುಗಳ ಜತೆ ನಂಟಿದೆ ಎಂದು ಅವರ ವಕೀಲರು ನೀಡಿರುವ ಹೇಳಿಕೆಯ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಕಾಂಗ್ರೆಸ್ ಪಕ್ಷವನ್ನು ಆಗ್ರಹಿಸಿದೆ. 2012-14ರ ನಡುವೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಮೆಹುಲ್ ಚೊಕ್ಸಿಯ ಆಸ್ತಿ ಭಾರೀ ಏರಿಕೆ ಕಂಡಿತ್ತು ಎಂದು ಬಿಜೆಪಿ ವಕ್ತಾರ ಅನಿಲ್ ಬಲುನಿ ಆರೋಪಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News