×
Ad

ನಾಡಪ್ರಭು ಕೆಂಪೇಗೌಡಗೆ ಜನತೆಯ ನೆಮ್ಮದಿಯೇ ಮುಖ್ಯವಾಗಿತ್ತು: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೃಷ್ಣಮೂರ್ತಿ

Update: 2018-08-04 23:25 IST

ಬೆಂಗಳೂರು, ಆ.4: ನಾಡಪ್ರಭು ಕೆಂಪೇಗೌಡರಿಗೆ ಜನತೆಯ ಶಾಂತಿ, ನೆಮ್ಮದಿಯೆ ಮುಖ್ಯವಾಗಿತ್ತು. ಈ ದೃಷ್ಟಿಯಿಂದಲೆ ಬೆಂಗಳೂರನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಿದ್ದರು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಎಂ.ಕೃಷ್ಣಮೂರ್ತಿ ಹೇಳಿದರು.

ಶನಿವಾರ ನಗರದ ಕರ್ನಾಟಕ ರಾಜ್ಯ ಸಹಕಾರಿ ಸಂಘದಲ್ಲಿ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ ಏರ್ಪಡಿಸಿದ ಉದ್ಘಾಟನಾ ಸಮಾರಂಭದಲ್ಲಿ ಅವರು, ಕೆಂಪೇಗೌಡರು ಬೆಂಗಳೂರನ್ನು 500 ವರ್ಷಗಳ ಹಿಂದೆಯೇ ವ್ಯವಸ್ಥಿತವಾಗಿ ಕಟ್ಟಿ, ಮಾದರಿಯಾಗಿದ್ದಾರೆ. ಅವರ ಮುಂದಾಲೋಚನೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು, ನಗರವನ್ನು ಅಭಿವೃದ್ಧಿಗೊಳಿಸಬೇಕಿದೆ ಎಂದು ತಿಳಿಸಿದರು.

ಕೆಂಪೇಗೌಡರು ಕೆರೆಕಟ್ಟೆಗಳನ್ನು ಕಟ್ಟಿಸಿ ಎಲ್ಲಾ ಧರ್ಮ, ಜಾತಿಯವರು ಸುಖ-ಶಾಂತಿ ನೆಮ್ಮದಿಯಿಂದ ಬಾಳಲಿಯೆಂದು ಆಶಿಸಿದ್ದರು. ಅವರ ಹಾದಿಯಲ್ಲಿ ನಾವು ಮುನ್ನಡೆಯುವ ಮೂಲಕ ಬೆಂಗಳೂರು ಸೌಹಾರ್ದಯುತ ವಾತಾವರಣ ನಿರ್ಮಿಸಬೇಕಿದೆ ಎಂದು ಅವರು ಆಶಿಸಿದರು.

ರಾಜ್ಯವನ್ನು ಒಡೆಯುವ ಕೆಲಸ ಯಾರು ಮಾಡಬಾರದು. ಕನ್ನಡ ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಹೊಂದಿರುವವರು ಅಖಂಡವಾಗಿದ್ದರೆ ಮಾತ್ರ ಕನ್ನಡದ ಅಸ್ಮಿತೆ ಉಳಿಯಲು ಸಾಧ್ಯ. ಹಾಗೂ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಒಟ್ಟಾಗಿ ಶ್ರಮಿಸೋಣವೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ ಸೇರಿದಂತೆ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News