×
Ad

ಸೆ.2ರಿಂದ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ರವಿವಾರಗಳಂದು ಕಾರ್ಯನಿರ್ವಹಿಸಲಿದೆ: ನ್ಯಾ.ದಿನೇಶ್ ಮಾಹೇಶ್ವರಿ

Update: 2018-08-04 23:29 IST

ಬೆಂಗಳೂರು, ಆ.4: ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರವು ಸೆ.2ರಿಂದ ರವಿವಾರಗಳಂದು ಕಾರ್ಯನಿರ್ವಹಿಸಲಿದೆ ಎಂದು ಹೈ ಕೋರ್ಟ್‌ನ ಮುಖ್ಯ ನ್ಯಾ.ದಿನೇಶ್ ಮಾಹೇಶ್ವರಿ ತಿಳಿಸಿದರು.

ಶನಿವಾರ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ಹತ್ತು ವರ್ಷಗಳಾಗಿರುವ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಾರಂಭದಲ್ಲಿ ರವಿವಾರ ಮಧ್ಯಾಹ್ನದವರೆಗೆ ಕಾರ್ಯನಿರ್ವಹಿಸಲಿದೆ. ಪ್ರಕರಣಗಳ ಸಂಖ್ಯೆಯನ್ನು ನೋಡಿಕೊಂಡು ಪೂರ್ಣದಿನ ಕಾರ್ಯನಿರ್ವಹಿಸುವಂತೆ ಸೂಚಿಸಲಾಗುವುದು ಎಂದು ತಿಳಿಸಿದರು.

ದೇಶದಲ್ಲೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರವು ಉತ್ತಮ ಕೇಂದ್ರವೆಂದು ಹೆಸರು ಗಳಿಸಿದೆ. ಇಲ್ಲಿಗೆ ಬರುವ ಬಹುತೇಕ ಪ್ರಕರಣವು ಕೇವಲ ಎರಡು ಸಲ ನಡೆಯುವ ಮಧ್ಯಸ್ಥಿಕೆ ಚರ್ಚೆಯಲ್ಲೆ ಇತ್ಯರ್ಥಗೊಳ್ಳುತ್ತಿವೆ. ಸುಪ್ರೀಂ ಕೋರ್ಟ್ ಸುಮಾರು 150ಕ್ಕೂ ಹೆಚ್ಚು ಪ್ರಕರಣಗಳನ್ನು ಬೆಂಗಳೂರು ಮಧ್ಯಸ್ಥಿಕೆ ಕೆಂದ್ರಕ್ಕೆ ರವಾನಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಮಧ್ಯಸ್ಥಿಕೆ ಕೇಂದ್ರವು 2007ರಲ್ಲಿ ಪ್ರಾರಂಭಗೊಂಡು 10ವರ್ಷಗಳನ್ನು ಪೂರೈಸಿದೆ. ಇಲ್ಲಿಯವರೆಗೂ 61,980 ಪ್ರಕರಗಳನ್ನು ಕೈಗೆತ್ತಿಕೊಂಡು 48,207 ಪ್ರಕರಣಗಳನ್ನು ಇತ್ಯರ್ಥಗೊಳಿಸಿರುವುದು ಕಡಿಮೆ ಸಾಧನೆಯಲ್ಲ. ಈ ಕೇಂದ್ರವು ಈಗ ಉತ್ತಮವಾಗಿದೆ, ಇದನ್ನು ಅತ್ಯುತ್ತಮಗೊಳಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.

ನಾನು ಮಧ್ಯಸ್ಥಿಕೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಿದ್ದೇನೆ. ಇದರಿಂದಾಗಿ ಸಮಾಜದ ವಿವಿಧ ಸ್ತರದ ಜನತೆಯ ಪರಿಚಯ, ಅನುಭವ ಹಾಗೂ ಸಮಸ್ಯೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ಇದರಿಂದ ನನ್ನ ಅನುಭವ, ಚಿಂತನೆಯನ್ನು ವಿಸ್ತರಿಸಿಕೊಳ್ಳಲು ಸಾಧ್ಯವಾಯಿತು. ಪ್ರತಿಯೊಂದು ಪ್ರಕರಣವು ವಿಶೇಷವಾಗಿದ್ದು, ಪರಿಹಾರದ ಸೂತ್ರಗಳು ಸಹ ಭಿನ್ನವಾಗಿಯೆ ಇರುತ್ತದೆ. ಹೀಗಾಗಿ ಮಧ್ಯಸ್ಥಿಕೆ ಕೇಂದ್ರದ ನ್ಯಾಯವಾದಿಗಳು ಪ್ರತಿಯೊಂದು ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಹಾರೋಪಾಯಗಳ ಕುರಿತು ಚರ್ಚಿಸಬೇಕಾಗುತ್ತದೆ ಎಂದು ಅವರು ಹೇಳಿದರು. ಈ ವೇಳೆ ನ್ಯಾ.ರವಿಮಣಿವಣ್ಣನ್, ನ್ಯಾ.ಪಿ.ವೀರಪ್ಪ, ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News