ಉದ್ಯಮಿಗಳ ಕೊಲೆ ಪ್ರಕರಣ: ಪ್ರಮುಖ ಆರೋಪಿ ಬಿಜೆಪಿ ಯುವ ಮುಖಂಡ?
ಬೆಂಗಳೂರು, ಆ.5: ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ತೇಜಸ್ ಎಂಬಾತ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯವಾಗಿದ್ದ ಎನ್ನಲಾಗಿದ್ದು, ಈತ ಮುಖಂಡರೊಂದಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಡೆ ಹರಿದಾಡುತ್ತಿವೆ.
ಬಿಬಿಎಂಪಿಯ ಮಾಜಿ ಮೇಯರ್ ಎಸ್.ಕೆ.ನಟರಾಜು, ಬಿಜೆಪಿ ಶಾಸಕ ಆರ್. ಅಶೋಕ್ ಸೇರಿದಂತೆ ಪ್ರಮುಖ ಮುಖಂಡರೊಂದಿಗೆ ಆರೋಪಿ ತೇಜಸ್ ಗುರುತಿಸಿಕೊಂಡಿದ್ದ. ಅಷ್ಟೇ ಅಲ್ಲದೆ, ಈ ಹಿಂದೆ ಪೊಲೀಸರು ತೇಜಸ್‌ನನ್ನು ವಿಚಾರಣೆಗೆ ಕರೆದ ಸಮಯದಲ್ಲಿ ಬಿಜೆಪಿ ನಾಯಕರುಗಳ ಜೊತೆ ತೆರಳುತ್ತಿದ್ದನು. ಹಲವು ಬಾರಿ ಎಸ್.ಕೆ.ನಟರಾಜು ಅರೋಪಿ ಜೊತೆ ಪೊಲೀಸ್ ಠಾಣೆಗೆ ತೆರಳಿದ್ದರು ಎಂದು ವರದಿಯಾಗಿದೆ.
ಮೃತ ದೇಹಗಳ ಪತ್ತೆ ಕಾರ್ಯ; ಉದ್ಯಮಿಗಳನ್ನು ಕೊಲೆ ಮಾಡಿ ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಗಳು ನೀಡಿರುವ ಹೇಳಿಕೆಯ ಆಧಾರದ ಮೇಲೆ ನಗರದ ದಕ್ಷಿಣ ವಿಭಾಗದ ಪೊಲೀಸರು, ತೀವ್ರ ತನಿಖೆ ಕೈಗೊಂಡಿದ್ದಾರೆ. ಪೊಲೀಸರ ವಶದಲ್ಲಿರುವ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿ ಕೆಲವು ಮಾಹಿತಿಗಳನ್ನು ತನಿಖಾಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ.
ಜೆ.ಪಿ.ನಗರದಿಂದ ಉದ್ಯಮಿಗಳನ್ನು ಅಪಹರಿಸಿ ಕನಕಪುರ ರಸ್ತೆಯಲ್ಲಿನ ಒಂದು ಫಾರಂ ಹೌಸ್‌ಗೆ ಕರೆದೊಯ್ದು ಅಲ್ಲಿ ಕೊಲೆ ಮಾಡಿ ಶವಗಳನ್ನು ಹೂತು ಹಾಕಿರುವುದಾಗಿ ಆರೋಪಿಗಳು ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.