ರೈಲು ವಿಳಂಬದಿಂದ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ: ಕುಮಾರಸ್ವಾಮಿ
ಬೆಂಗಳೂರು, ಆ. 5: ರಾಣಿ ಚೆನ್ನಮ್ಮ ಎಕ್ಸ್ ಪ್ರೆಸ್ ರೈಲು ವಿಳಂಬವಾಗಿದ್ದರಿಂದ ಸಶಸ್ತ್ರ ಮೀಸಲು ಪಡೆ ನೇಮಕಾತಿ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ಒದಗಿಸುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದ್ದಾರೆ.
ಅಭ್ಯರ್ಥಿಗಳು ಯಾರೂ ಗಾಬರಿಯಾಗಬೇಕಿಲ್ಲ. ಮತ್ತೊಮ್ಮೆ ಪರೀಕ್ಷೆ ನಡೆಸುವ ಬಗ್ಗೆ ಕೂಡಲೇ ದಿನಾಂಕ ಪ್ರಕಟಿಸಲು ಅಧಿಕಾರಿಗಳು ಕ್ರಮ ವಹಿಸಲಿದ್ದಾರೆ ಎಂದು ಹೇಳಿರುವ ಅವರು, ರೈಲು ವಿಳಂಬವಾದ ಕುರಿತು ರೈಲ್ವೆ ಸಚಿವರ ಗಮನ ಸೆಳೆದು ಇಂತಹ ಅಚಾತುರ್ಯಗಳಾಗದಂತೆ ಕ್ರಮ ವಹಿಸಲು ಕೋರಲಾಗುವುದು ಎಂದು ಹೇಳಿದ್ದಾರೆ.
ಪೊಲೀಸ್ ಇಲಾಖೆಯ ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ಅವರಿಗೆ ಸೂಚನೆ ನೀಡಿದ್ದು, ಶೀಘ್ರವೇ ಪರೀಕ್ಷೆಯ ಮುಂದಿನ ದಿನಾಂಕ ಪ್ರಕಟಿಸಲಾಗುವುದು. ಅಲ್ಲದೆ, ಹುಬ್ಬಳ್ಳಿಯಲ್ಲಿ ಪರೀಕ್ಷಾ ಕೇಂದ್ರ ಸ್ಥಾಪಿಸುವ ಕುರಿತೂ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.
ರೈಲು ವಿಳಂಬದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ಕುರಿತು ಮಾಧ್ಯಮಗಳಲ್ಲಿ ಪ್ರಸಾರವಾದ ವರದಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ, ಕೂಡಲೇ ಡಿಜಿಪಿ ಅವರಿಗೆ ಅಂತಹ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದರು.
ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶನಿವಾರ ಹೊರಡಬೇಕಿದ್ದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್ ರೈಲು ರವಿವಾರ ಬೆಳಗ್ಗೆ ಹೊರಟ ಕಾರಣ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪರೀಕ್ಷೆ ಬರೆಯಲು ರಾಜಧಾನಿಗೆ ಹೊರಟಿದ್ದ ನೂರಾರು ಉದ್ಯೋಗ ಆಕಾಂಕ್ಷಿಗಳು ಅವಕಾಶ ಕಳೆದುಕೊಳ್ಳುವ ಭೀತಿ ಆವರಿಸಿತ್ತು. ಕೊಲ್ಹಾಪುರದಿಂದ ಹುಬ್ಬಳ್ಳಿ, ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ರೈಲು ಬರಬೇಕಾಗಿತ್ತು. ಧಾರವಾಡದ ಕಂಬಾರಗಣವಿ ಸಮೀಪ ರಾತ್ರಿ ಗೂಡ್ಸ್ ರೈಲು ಕೆಟ್ಟು ನಿಂತಿದ್ದ ಕಾರಣ, ಅದೇ ಮಾರ್ಗದಲ್ಲಿ ಸಂಚರಿಸಬೇಕಾಗಿದ್ದ ರೈಲು ಹುಬ್ಬಳ್ಳಿ ನಿಲ್ದಾಣ ತಲುಪಲಿಲ್ಲ. ಗೂಡ್ಸ್ ರೈಲಿನ ಇಂಜಿನ್ ಸರಿಪಡಿಸಿ, ಪ್ಯಾಸೆಂಜರ್ ರೈಲಿಗೆ ಅವಕಾಶ ಮಾಡಿಕೊಡಲು 5 ಗಂಟೆ ವಿಳಂಬವಾಯಿತು. ಇದರ ಪರಿಣಾಮ ರೈಲು ಬೆಳಗ್ಗೆ ಹೊರಟಿತು. ಹೀಗಾಗಿ ಆಕ್ರೋಶಗೊಂಡ ಉದ್ಯೋಗ ಆಕಾಂಕ್ಷಿಗಳು ಪ್ರತಿಭಟನೆ ನಡೆಸಿದರು. ಸರಿಯಾಗಿ ಮಾಹಿತಿ ನೀಡದ, ಸಮಸ್ಯೆ ಬಗೆಹರಿಸದ ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.