ಸಿದ್ದಯ್ಯ ಪುರಾಣಿಕ ಜನ್ಮ ಶತಮಾನೋತ್ಸವ ಆಚರಣೆಗೆ ಚಿಂತನೆ: ಕವಿ ಡಾ.ಸಿದ್ದಲಿಂಗಯ್ಯ

Update: 2018-08-05 12:30 GMT

ಬೆಂಗಳೂರು, ಆ.5: ಇತ್ತೀಚಿಗೆ ನಡೆದ ಕೇಂದ್ರ ಸಾಹಿತ್ಯ ಅಕಾಡೆಮಿ ಸಭೆಯಲ್ಲಿ ಮಕ್ಕಳ ಸಾಹಿತಿ ಸಿದ್ದಯ್ಯ ಪುರಾಣಿಕ ಅವರ ಜನ್ಮ ಶತಮಾನೋತ್ಸವ ಆಚರಿಸಲು ತೀರ್ಮಾನಿಸಲಾಗಿದ್ದು, ಪೂರ್ವ ತಯಾರಿ ನಡೆಸಲಾಗುತ್ತಿದೆ ಎಂದು ಕವಿ ಡಾ.ಸಿದ್ದಲಿಂಗಯ್ಯ ಅವರು ತಿಳಿಸಿದ್ದಾರೆ.

ರವಿವಾರ ನಗರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಹೊಂಬಾಳೆ ಪ್ರತಿಭಾರಂಗ ಸಹಯೋಗದಲ್ಲಿ ಕನ್ನಡ ಭವನದಲ್ಲಿ ನಡೆದ ಮಕ್ಕಳ ಸಾಹಿತಿ ಡಾ.ಸಿದ್ದಯ್ಯ ಪುರಾಣಿಕ ಅವರ ಜನ್ಮ ಶತಮಾನೋತ್ಸವ ಹಾಗೂ ಎಚ್.ಪಾಲ್ಗುಣಿ ಅವರ ಸಂಗೀತ ನಿರ್ದೇಶನದ ‘ನನ್ನ ಕುದುರೆ’ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪುರಾಣಿಕರು ಕರ್ನಾಟಕ ಕಂಡ ಶ್ರೇಷ್ಠ ವ್ಯಕ್ತಿ ಎಂದು ತಿಳಿಸಿದರು. ಸಿದ್ದಯ್ಯ ಪುರಾಣಿಕ ಕವಿ , ಮಾನವತಾವಾದಿ ಹಾಗೂ ತತ್ವಶಾಲಿ ರಚನಾಕಾರ. ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಉನ್ನತ ಅಧಿಕಾರಿಯಾಗಿ ಕನ್ನಡದ ಪರ ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡದ ಬಗ್ಗೆ ಸಾಕಷ್ಟು ಒಲವು ಹೊಂದಿದ್ದರು. ಸಜ್ಜನ ಅಧಿಕಾರಿಯಾಗಿ ಕನ್ನಡ್ಕಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಸಾಹಿತ್ಯ ಮತ್ತು ಕನ್ನಡಕ್ಕೆ ನ್ಯಾಯ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ವ್ಯಕ್ತಿಗಳ ಅಚರಣೆ ಮಾಡುವುದು ಅವರಿಗೆ ಸಲ್ಲಿಸುವ ಗೌರವ ಎಂದು ಹೇಳಿದರು.

ಇಂದು ಪ್ರತ್ಯೇಕ ಕರ್ನಾಟಕಕ್ಕಾಗಿ ಕೂಗು ಕೇಳಿ ಬಂದಿದೆ. ಆದರೆ, ಅಂದಿನ ಸಂದರ್ಭದಲ್ಲಿಯೇ ಹೈದರಾಬಾದ್ ಕರ್ನಾಟಕ ಉಳಿಯಲು ಪುರಾಣಿಕ ಸಾಕಷ್ಟು ಶ್ರಮಿಸಿದ್ದಾರೆ. ಸಾತ್ವಿಕ ವ್ಯಕ್ತಿಯಾಗಿದ್ದ ಅವರು, ಅಸಮಾನತೆ, ಭ್ರಷ್ಟಾಚಾರ ಕಂಡಾಗ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಅವರು ಕನ್ನಡಿಗರಿಗೆ , ಕನ್ನಡಕ್ಕೆ ಮಾಡಿದ ಸೇವೆ ಎಂದೂ ಮರೆಯುವಂತಿಲ್ಲ ಎಂದು ಅವರು ತಿಳಿಸಿದರು.

ನಗರದಲ್ಲಿ ಸಾಂಸ್ಕೃತಿಕ ಕಲಾ ಕೇಂದ್ರವಾದ ರವೀಂದ್ರ ಕಲಾಕ್ಷೇತ್ರ ರೂಪುಗೊಳ್ಳಲು ಇವರ ಪಾತ್ರ ಮಹತ್ವದ್ದು. ಏಕೀಕರಣದ ನಂತರ ಹೈದ್ರಾಬಾದ್‌ನಲ್ಲಿದ್ದ ಕಸಾಪ ರಾಜ್ಯಕ್ಕೆ ತಂದರು. ಅಲ್ಲದೆ, ಕಾವೇರಿ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಇವರ ಪಾತ್ರ ಅತಿ ಮುಖ್ಯವಾದುದು ಎಂದ ಸಿದ್ದಲಿಂಗಯ್ಯ ತಿಳಿಸಿದರು.

ಹಾಲಿಗಿಂತ ಹೆಂಡದಂಗಡಿ ಹೆಚ್ಚು ಹೆಸರು ವಾಸಿಯಾಗಿದೆ. ಮಧ್ಯಪಾನದಿಂದ ದೇಶ ಹಾಳಾಗುತ್ತಿದೆ ಎಂದು ಅಂದು ಪುರಾಣಿಕ್ ಹೇಳಿದ್ದರು. ಗಾಂಧೀಜಿ, ಪ್ರಭಾವ ಅವರ ಮೇಲೆ ಇತ್ತು ಎಂದ ಅವರು, ಕೈವಾರ ತಾತಯ್ಯ ಅವರು ಸಹ ಹೆಂಡ ಕುಡಿಯುವ ಕಾಲ ಹೋಗುತ್ತದೆ, ಬೆಣ್ಣೆ, ತುಪ್ಪ, ಮಜ್ಜಿಗೆ ಕುಡಿದು, ಹಣ್ಣು ತಿನ್ನುವ ಕಾಲ ಬರುತ್ತದೆ ಅಂದಿದ್ದರು. ಅದಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ ನುಡಿದರು.

ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಬಿ.ವಿ.ಶ್ರೀನಿವಾಸ್, ಪುರಾಣಿಕ ಪುತ್ರ ಪ್ರಸನ್ನ ಕುಮಾರ್ ಪುರಾಣಿಕ್, ಸಂಗೀತ ನಿರ್ದೇಶಕ ಎಚ್.ಪಾಲ್ಗುಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News