‘ನರೇಗಾ’ ವ್ಯವಸ್ಥಿತವಾಗಿ ರೂಪುಗೊಂಡಿಲ್ಲ: ಎಚ್.ಎಸ್.ದೊರೆಸ್ವಾಮಿ

Update: 2018-08-05 12:41 GMT

ಬೆಂಗಳೂರು, ಆ.5: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ವ್ಯವಸ್ಥಿತವಾಗಿ ರೂಪಗೊಂಡಿಲ್ಲ. ಇದರಿಂದ ಶ್ರಮಿಕರಿಗೆ ಹಣ ಸೇರುತ್ತಿಲ್ಲ ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಗುತ್ತಿಗೆ ನೌಕರರ ಒಕ್ಕೂಟ ಏರ್ಪಡಿಸಿದ, ಉದ್ಯೋಗ ಮತ್ತು ಸೇವಾಭದ್ರತೆ ಸಮಾನ ವೇತನಕ್ಕೆ ಆಗ್ರಹಿಸಿ ನಡೆಸಿದ ದುಂಡು ಮೇಜಿನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನರೇಗಾ ಯೋಜನೆಯಿಂದ ಯಾರಿಗೆ ಹಣ ಸೇರಬೇಕೊ ಅವರಿಗೆ ಹಣ ಸೇರದೆ ಮಧ್ಯವರ್ತಿಗಳ ಜೇಬಿಗೆ ಹಣ ಸೇರುತ್ತಿದೆ. ಅಲ್ಲದೆ, ಈ ಯೋಜನೆ ಗ್ರಾಮೀಣ ಭಾಗದ ಜನರಿಗೆ ಅನುಕೂಲಾಗಿದೆ. ಆದರೆ, ಈ ಬಗ್ಗೆ ಜಾಗೃತಿ ಮೂಡಿಸಿ, ಇದರಲ್ಲಿನ ಲೋಪಗಳನ್ನು ಸರಿಪಡಿಸಬೇಕಾಗಿದೆ ಎಂದು ಹೇಳಿದರು.

ಗುತ್ತಿಗೆ ಮತ್ತು ಎಲ್ಲ ಬಗೆಯ ತಾತ್ಕಾಲಿಕ ನೌಕರರಿಗೆ ಸೇವಾ ಭದ್ರತೆ ಹೊದಗಿಸಬೇಕು. ಸರಕಾರ ನೀಡುವ ಆಶ್ವಾಸನೆಗಳು ಕಾಗದದ ಮೇಲೆ ಉಳಿಯುತ್ತೆ, ಅಲ್ಲದೇ, ಯಾರಿಗೆ ಉದ್ಯೋಗ ಕೊಡುತ್ತಿದೆ ಅನ್ನೋದೇ ಗೊತ್ತಿಲ್ಲ, ಯುವಕರು ಸ್ವಯಂ ಉದ್ಯೋಗಿಗಳಾಗಿ, ತಾವೇ ಉದ್ಯೋಗ ಸೃಷ್ಠಿ ಮಾಡಬೇಕು ಇದಕ್ಕೆಲ್ಲ ಸೂಕ್ತ ಮಾರ್ಗದರ್ಶಕರು ಬೇಕು ಎಂದು ದೊರೆಸ್ವಾಮಿ ಹೇಳಿದರು.

ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಮಾತನಾಡಿ, ವ್ಯವಸ್ಥೆಯಲ್ಲಿಯೇ ಗಂಭೀರ ಬೇಧಗಳಿವೆ. ನಿರುದ್ಯೋಗವು ವ್ಯಕ್ತಿಗತ ಸಮಸ್ಯೆಯಲ್ಲ ಅದೊಂದು ಸಾಮಾಜಿಕ ಸಮಸ್ಯೆ. ಘನತೆಯುಳ್ಳ ಸುಭದ್ರ ಉದ್ಯೋಗವು ಪ್ರತಿಯೊಬ್ಬರ ಹಕ್ಕು. ಅಲ್ಲದೆ, ಸರಕಾರಗಳು ಉದ್ಯೋಗ ಸೃಷ್ಠಿಗೆ ಶಿಸ್ತುಬದ್ಧ ಚೌಕಟ್ಟು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಕ್ಕೊತ್ತಾಯಗಳು: ಎಲ್ಲ ಉದ್ಯೋಗಿಗಳಿಗೆ ಕನಿಷ್ಠ ಸರಕಾರಿ ಗ್ರೂಪ್ ‘ಡಿ’ ನೌಕರರ ವೇತನವನ್ನು ನೀಡಬೇಕು. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಕಲ್ಪಿಸಿದ ನಂತರ ಮುಂದಿನ 6 ತಿಂಗಳೊಳಗಾಗಿ ಸರಕಾರದ ಎಲ್ಲ ಇಲಾಖೆಗಳ ಖಾಲಿ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. ಎಲ್ಲ ಬೆಳೆಗಳಿಗೂ ಸ್ವಾಮಿನಾಥನ್ ಆಯೋಗದ ಶಿಫಾರಸಿನ ಅನ್ವಯ ಸೂಕ್ತ ಬೆಲೆ ನೀಡಬೇಕು. ಕೇವಲ ಕೌಶಲ್ಯ ಭಾರತವಲ್ಲದೆ, ಉದ್ಯೋಗಸ್ಥ ಭಾರತ ಬೇಕು ಎನ್ನುವ ಹಕ್ಕೊತ್ತಾಯಗಳ ಈಡೇರಿಕೆಗೆ ಹೋರಾಟ ರೂಪಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಂದರ್ಭದಲ್ಲಿ ಸುಸ್ಥಿರ ಉದ್ಯೋಗ ಕೇಂದ್ರದ ನಿರ್ದೇಶಕ ಅಮಿತ್ ಭಾಸೊಲೆ, ಅಂಕಣಕಾರ ಕೆ.ಪಿ.ಸುರೇಶ್, ಡಾ.ಎಚ್.ವಿ.ವಾಸು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News