ಜೆಡಿಎಸ್ ಏಕಾಂಗಿ ಸ್ಪರ್ಧೆಗೆ ನಿರ್ಧಾರ: ಎಚ್.ಡಿ.ದೇವೇಗೌಡ
ಬೆಂಗಳೂರು, ಆ.5: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ವಿಚಾರದ ಕುರಿತು ಕಾಂಗ್ರೆಸ್ ಜೊತೆ ನಮಗೆ ಯಾವುದೆ ತಿಕ್ಕಾಟವಿಲ್ಲ. ಏಕಾಂಗಿಯಾಗಿಯೇ ನಾವು ಸ್ಪರ್ಧಿಸುತ್ತೇವೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ರವಿವಾರ ನಗರದ ಜೆಡಿಎಸ್ ಕಚೇರಿ(ಜೆ.ಪಿ.ಭವನ)ಯಲ್ಲಿ ನಡೆದ ಪಕ್ಷದ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಘರ್ಷಕ್ಕೆ ಅವಕಾಶವಿಲ್ಲದೆ ಚುನಾವಣೆ ಎದುರಿಸುತ್ತೇವೆ. ಕಾಂಗ್ರೆಸ್ ನಾಯಕರು ಇದನ್ನೆ ಹೇಳಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನನ್ನ ಜೊತೆ ಚರ್ಚೆ ನಡೆಸಿದ್ದಾರೆ. ಅವರೂ ಇದನ್ನೆ ಹೇಳಿದ್ದಾರೆ. ಹೀಗಾಗಿ ಏಕಾಂಗಿಯಾಗಿ ಸ್ಪರ್ಧೆಗೆ ನಿರ್ಧರಿಸಿದ್ದೇವೆ. ಇದರಿಂದ, ರಾಜ್ಯ ಸರಕಾರದ ಮೈತ್ರಿಗೆ ಯಾವುದೆ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ದೇವೇಗೌಡ, ಸೆಪ್ಟಂಬರ್ ಅಥವಾ ಅಕ್ಟೋಬರ್ ಮೊದಲ ವಾರ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯಲಿದೆ ಎಂದರು.
ರೈತರ ಸಾಲ ಮನ್ನಾ ವಿಚಾರದ ಬಗ್ಗೆ ಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತಿದೆ. ರಾಷ್ಟ್ರೀಯ ಪಕ್ಷವೊಂದು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದೆ. ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಮೂರು ಜಿಲ್ಲೆಗೆ ಸೀಮಿತವಾಗಿಲ್ಲ. ಅದನ್ನು ನಾವು ಸಾಬೀತುಪಡಿಸುತ್ತೇವೆ. ನಮ್ಮ ಮೇಲಿನ ಆರೋಪವನ್ನು ದೂರ ಮಾಡಲು ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿಸುತ್ತೇವೆ ಎಂದು ದೇವೇಗೌಡ ಹೇಳಿದರು.
ಪ್ರತ್ಯೇಕ ಉತ್ತರ ಕರ್ನಾಟಕದ ವಿಚಾರಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ನಮ್ಮ ವಿರುದ್ಧ ಮಾಡಿರುವ ಆರೋಪದಿಂದ ನಮಗೆ ಯಾವುದೇ ಆತಂಕವಿಲ್ಲ ಎಂದು ಅವರು ತಿರುಗೇಟು ನೀಡಿದರು.
ನೀರಾವರಿ ಸಚಿವ, ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ನಾನು ಜಾತಿ ಇಟ್ಟುಕೊಂಡು ಕೆಲಸ ಮಾಡಿದವನಲ್ಲ, ಪಾಪ ಅವರಿಗೆ ಇದನ್ನು ಜ್ಞಾಪಕ ಮಾಡಿಕೊಡುತ್ತೇನೆ. ಅವರ ಜೊತೆ ಮಾತನಾಡುವುದೇನಿದೆ. ನನ್ನ ಜನತೆಯ ಮುಂದೆ ಕೂತು ನಾನೇ ಮಾತನಾಡುತ್ತೇನೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಏನು ಇಟ್ಟಿದ್ದಾರೆ. ನಾವು ಬಜೆಟ್‌ನಲ್ಲಿ ಏನು ಘೋಷಿಸಿದ್ದೇವೆ ಎಂಬುದನ್ನು ನಾವೇ ಕಿರು ಹೊತ್ತಿಗೆ ಮೂಲಕ ಹೊರ ತರುತ್ತೇವೆ. ಇದರಲ್ಲಿ ಪ್ರತಿಪಕ್ಷ ಬಿಜೆಪಿಯವರು ಹೇಳುವುದೇನಿದೆ ಎಂದು ಪ್ರಶ್ನೆಯೊಂದಕ್ಕೆ ದೇವೇಗೌಡ ಉತ್ತರಿಸಿದರು.