×
Ad

ರಕ್ಷಣಾ ಕ್ಷೇತ್ರದಲ್ಲಿ ನವೋದ್ಯಮಗಳಿಗೆ ನೆರವು: ನಿರ್ಮಲಾ ಸೀತಾರಾಮನ್

Update: 2018-08-05 19:38 IST

ಬೆಂಗಳೂರು, ಆ.5: ದೇಶದ ರಕ್ಷಣಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾಗುವ ಆಸಕ್ತ ನವೋದ್ಯಮಗಳಿಗೆ ಕೇಂದ್ರ ಸರಕಾರವು ಅಗತ್ಯವಿರುವ ಎಲ್ಲ ಬಗೆಯ ನೆರವು ನೀಡಲು ಸಿದ್ಧವಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಶನಿವಾರ ನಗರದ ಎಚ್‌ಎಎಲ್‌ನಲ್ಲಿ ಆಯೋಜಿಸಿದ್ದ ‘ಡಿಫೆನ್ಸ್ ಇಂಡಿಯಾ ಸ್ಟಾರ್ಟ್ ಅಪ್ ಚಾಲೆಂಜ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ಷಣಾ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಹಾಗೂ ತಂತ್ರಜ್ಞಾನಗಳನ್ನು ಸೃಷ್ಟಿಸಿರುವವರ ಕೊರತೆಯಿದೆ ಎಂದರು.

ದೇಶದ ರಕ್ಷಣಾ ತಂತ್ರಜ್ಞಾನವನ್ನು ಹೆಚ್ಚಿಸಲು ಕೇಂದ್ರ ಸರಕಾರ ಮುಂದಾಗಿದ್ದು, ಪರಿಸರಕ್ಕೆ ಪೂರಕವಾಗುವಂತಹ ತಂತ್ರಜ್ಞಾನ ರೂಪಿಸಲು ನಮ್ಮ ಜೊತೆ ತಂತ್ರಜ್ಞರು ಕೈ ಜೋಡಿಸಬೇಕು. ಇತ್ತೀಚಿನ ಮಾನವ ರಹಿತ ಡ್ರೋನ್ ಹಾಗೂ ಕ್ಷಿಪಣಿಗಗಳು ಖಂಡಾಂತರ ದೂರದವರೆಗೆ ಹಾರಬಲ್ಲವು. ಇಂತಹ ಸೌಲಭ್ಯ ಬಹತೇಕ ರಾಷ್ಟ್ರಗಳಲ್ಲಿವೆ ಎಂದು ಅವರು ಹೇಳಿದರು.

ಅಮೆರಿಕದಿಂದ ಆಕ್ರಮಣಕಾರಿ ಪ್ರೆಡಟರ್-ಬಿ ಡ್ರೋನ್(ಹಾರುವ ಯಂತ್ರ) ಮತ್ತು ಗಾರ್ಡಿಯನ್ ಪಡೆಯುವ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ. ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಹಾಗೂ ನಿಖರವಾಗಿ ವೈರಿಗಳ ಮೇಲೆ ದಾಳಿ ನಡೆಸಬಲ್ಲ ಮಾನವ ರಹಿತ ಡ್ರೋನ್ ಗಳನ್ನು ಅಭಿವೃದ್ಧಿಗೊಳಿಸುವಂತೆ ನವೋದ್ಯಮಗಳಿಗೆ ನಿರ್ಮಲಾ ಸೀತಾರಾಮನ್ ಕರೆ ನೀಡಿದರು.

ನಮ್ಮಲ್ಲಿ ಇಂತಹ ತಂತ್ರಜ್ಞಾನಗಳು ಬೆಳೆಯಬೇಕು. ಪ್ರಧಾನಿ ನರೇಂದ್ರಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಗಮನದಲ್ಲಿಟ್ಟುಕೊಂಡು, ದೇಶದ ಭದ್ರತೆ ಹಾಗೂ ಸುರಕ್ಷತೆಗಾಗಿ ಇಂತಹ ಡ್ರೋನ್‌ಗಳನ್ನು ಅಭಿವೃದ್ಧಿ ಪಡಿಸಬೇಕಿದೆ ಎಂದು ಅವರು ಹೇಳಿದರು.

ಡ್ರೋನ್‌ಗಳ ಯೋಜನೆ ಮತ್ತು ಅಭಿವೃದ್ಧಿಯ ಕಲ್ಪನೆಯೊಂದಿಗೆ ಮುಂದೆ ಬರುವ ಎಲ್ಲ ರೀತಿಯ ನವೋದ್ಯಮಗಳಿಗೆ ರಕ್ಷಣಾ ಸಚಿವಾಲಯವು ಸದಾ ಬೆಂಬಲ ನೀಡಲಿದೆ. ಭಾರತವು ತನ್ನ ಸಶಸ್ತ್ರ ಪಡೆಗಳಿಗೆ ಡ್ರೋನ್ ಸೇರಿದಂತೆ ಅಗತ್ಯವಾದ ಎಲ್ಲ ಅತ್ಯಾಧುನಿಕ ರಕ್ಷಣಾ ಸಾಧನಗಳನ್ನು ಅಮೆರಿಕ ಸೇರಿದಂತೆ ವಿವಿಧ ದೇಶಗಳಿಂದ ಹೊಂದಲು ಉತ್ಸುಕವಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News