ಎಂ.ಭಕ್ತವತ್ಸಲ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಸಂತಾಪ
ಬೆಂಗಳೂರು, ಆ. 5 ಖ್ಯಾತ ಚಲನಚಿತ್ರ ನಿರ್ಮಾಪಕ, ಸಂಘಟಕ ಎಂ.ಭಕ್ತವತ್ಸಲ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಚ್‌ಎಂಟಿಯಲ್ಲಿ ಅಧಿಕಾರಿಯಾಗಿದ್ದ ಅವರು, ಚಲನಚಿತ್ರ ಹಂಚಿಕೆ, ಚಿತ್ರಮಂದಿರಗಳ ನಿರ್ವಹಣೆಯನ್ನು ವಹಿಸಿಕೊಂಡವರು. ಮುಂದಿನ ದಿನಗಳಲ್ಲಿ ಸಂಧ್ಯಾರಾಗ, ಚಂಡಮಾರುತ, ಸಂಸ್ಕಾರದಂತಹ ಹಲವು ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಪಕರಾಗಿಯೂ ಗಮನ ಸೆಳೆದರು.
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿ ವಾಣಿಜ್ಯ ಮಂಡಲಳಿಯನ್ನು ಉತ್ತುಂಗಕ್ಕೆ ಒಯ್ದರು. ಭಾರತೀಯ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆ ಇವರದು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಸಾಹಿತ್ಯ, ಪರ್ವತಾರೋಹಣ ಹೀಗೆ ವೈವಿಧ್ಯಮಯ ಆಸಕ್ತಿ ಹೊಂದಿದ್ದರು. ಇವರ ನಿಧನ ಕನ್ನಡ ಚಲನಚಿತ್ರರಂಗ ಸಂಘಟನಾ ಚತುರ ನಾಯಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಇವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಎಂದು ಕುಮಾರಸ್ವಾಮಿ ಪ್ರಕಟಣೆಯಲ್ಲಿ ಪ್ರಾರ್ಥಿಸಿದ್ದಾರೆ.