ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಗತ್ಯ

Update: 2018-08-05 18:39 GMT

ಮಾನ್ಯರೇ,

ಜನದಟ್ಟಣೆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಕಡ್ಡಾಯ ಎಂದು ಪೊಲೀಸ್ ಇಲಾಖೆ ಆದೇಶ ನೀಡಿದೆ. ಇದೇ ರೀತಿಯಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವುದು ಅಗತ್ಯವಾಗಿದೆ. ಎರಡು ಕಾರಣಗಳಿಗಾಗಿ ಬಸ್‌ಗಳಲ್ಲಿ ಸಿಸಿ ಕ್ಯಾಮರಾ ಅತ್ಯಗತ್ಯ. ಒಂದು, ಶಾಲಾವಧಿಯಲ್ಲಿ ಬಸ್‌ಗಳು ತುಂಬಿ ತುಳುಕುತ್ತಿರುತ್ತವೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆಗುವುದು ಜಾಸ್ತಿ. ಬೇಕೆಂದೇ ಒರೆಸುತ್ತಾ ಹೋಗುವುದು, ಮೈ, ಕೈ ತಾಗಿಸುವುದನ್ನು ಮಾಡುವವರು ಅಧಿಕ ಇದ್ದಾರೆ. ಬಸ್ ತುಂಬಿ ತುಳುಕಿರುವುದರಿಂದ ದುಷ್ಕರ್ಮಿಗಳು ಇದರ ಲಾಭವನ್ನು ಪಡೆಯುತ್ತಾರೆ. ಹೆಚ್ಚಿನ ಬಸ್‌ಗಳಲ್ಲಿ ಬಸ್ ನಿರ್ವಾಹಕರು ಅಥವಾ ಕಂಡಕ್ಟರ್‌ಗಳು ವಿದ್ಯಾರ್ಥಿನಿಯ ಮೇಲೆ ಇದೇ ರೀತಿ ವರ್ತಿಸುತ್ತಾರೆ.

ಟಿಕೆಟ್ ಕೊಡುವ ನೆಪದಲ್ಲಿ ಬೇಕು ಬೇಕೆಂದೇ ಆಗಾಗ ವಿದ್ಯಾರ್ಥಿಗಳ ಮಧ್ಯೆ ನುಗ್ಗಿ ಅವರಿಗೆ ಮಾನಸಿಕ ಹಿಂಸೆ ನೀಡುತ್ತಾರೆ. ಪ್ರಶ್ನಿಸಿದರೆ ಅಸಭ್ಯ ಭಾಷೆಯಿಂದ ಗದರಿಸುತ್ತಾರೆ. ನಿರ್ವಾಹಕರು ಬಸ್ ಪ್ರಯಾಣಿಕರೊಂದಿಗೆ ಅಸಹನೆಯಿಂದ ವ್ಯವಹರಿಸುತ್ತಿರುವುದು ಹೆಚ್ಚುತ್ತಿದೆ. ಕೈಯಲ್ಲಿ ಚಿಲ್ಲರೆ ಇದ್ದರೂ ಕೊಡದೇ ಇರುವುದು, ಕೇಳಿದರೆ ಅತ್ಯಂತ ಕೆಟ್ಟ ಭಾಷೆಯಲ್ಲಿ ನಿಂದಿಸುತ್ತಾರೆ. ಸರಕಾರಿ ನೌಕರ ಎನ್ನುವ ಧೈರ್ಯದಿಂದ ಹಲ್ಲೆಗೂ ಮುಂದಾಗುತ್ತಾರೆ. ಪ್ರಯಾಣಿಕ ಪ್ರತಿ ಹಲ್ಲೆ ನಡೆಸುವಂತೆಯೂ ಇಲ್ಲ. ಬಸ್‌ನಿಂದ ಇಳಿಯುವವರೆಗೂ ಚಿಲ್ಲರೆಕೊಡದೆ, ನೂರು ರೂಪಾಯಿ ನೋಟುಗಳನ್ನು ಕಿಸೆಗೆ ಹಾಕಿಕೊಳ್ಳುವ ನಿರ್ವಾಹಕರ ಸಂಖ್ಯೆ ಜಾಸ್ತಿಯಾಗಿದೆ. ಜೊತೆಗೆ ಬಸ್‌ನೊಳಗೆ ನಿರ್ವಾಹಕರ ಬೆಂಬಲದೊಂದಿಗೇ ಪಿಕ್‌ಪಾಕೆಟ್ ಜನರೂ ಸೇರಿಕೊಳ್ಳುತ್ತಿದ್ದಾರೆ. ಹಾಗೆಯೇ ಬಸ್ ನಿರ್ವಾಹಕರು ಟಿಕೆಟ್ ನೀಡದೆ ಸರಕಾರಕ್ಕೆ ವಂಚಿಸುವುದನ್ನು ಸಿಸಿ ಕ್ಯಾಮರಾದಿಂದ ತಡೆಯಬಹುದಾಗಿದೆ. ಆದುದರಿಂದ ಕೆಎಸ್ಸಾರ್ಟಿಸಿ ಬಸ್‌ಗಳ ಉತ್ತಮ ನಿರ್ವಹಣೆಗಾಗಿ ತಕ್ಷಣದಿಂದಲೇ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕಾಗಿದೆ.

Writer - ರಾಮಚಂದ್ರ ಹುದಂಗಜೆ, ಸುಳ್ಯ

contributor

Editor - ರಾಮಚಂದ್ರ ಹುದಂಗಜೆ, ಸುಳ್ಯ

contributor

Similar News