ಎತ್ತಿನಹೊಳೆ ಯೋಜನೆ: 527 ಕೆರೆಗಳ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ

Update: 2018-08-06 12:52 GMT

ಬೆಂಗಳೂರು, ಆ. 6: ಎತ್ತಿನಹೊಳೆ ಯೋಜನೆಯಡಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿನ 527 ಕೆರೆಗಳ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಲು ಈ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶ್ಚಿಮಘಟ್ಟಗಳಿಂದ ಹರಿದು ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿ, ಬರಪೀಡಿತ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು, ಅಂತರ್ಜಲ ಮರುಪೂರಣಕ್ಕಾಗಿ ಯೋಜನೆ ರೂಪಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆ, ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿರುವ ಕೆರೆಗಳ ಪುನಶ್ಚೇತನವನ್ನು ಹಂತ-ಹಂತವಾಗಿ ಯೋಜನೆ ಜೊತೆ ಸಮಾನಾಂತರವಾಗಿ ಕೈಗೊಳ್ಳಲು ಹಾಗೂ ಈ ನೀರನ್ನು ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಂತೆ ಸಲಹೆ ನೀಡಿದರು. 

ಎತ್ತಿನಹೊಳೆ ಯೋಜನೆಗೆ ಮೂರು ಭೂಸ್ವಾಧೀನಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇವರನ್ನು ತುರ್ತಾಗಿ ನೇಮಕ ಮಾಡಬೇಕು ಎಂದ ಅವರು, ಯೋಜನೆಗೆ ಅವಶ್ಯವಿರುವ 21 ಹಳ್ಳಿಗಳ 5 ಸಾವಿರ ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಹಾಗೂ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಸ್ಪೀಕರ್ ಕೆ.ಆರ್.ರಮೇಶ್‌ ಕುಮಾರ್, ಕೃಷಿ ಸಚಿವ ಶಿವಶಂಕರ ರೆಡ್ಡಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐಎಸ್‌ಎನ್ ಪ್ರಸಾದ್ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News