ಗೌರಿ ಲಂಕೇಶ್ ಹತ್ಯೆ ಪ್ರಕರಣ: ಆರೋಪಿಗಳ ವೈದ್ಯಕೀಯ ಪರೀಕ್ಷೆಗೆ ನ್ಯಾಯಾಲಯ ಒಪ್ಪಿಗೆ

Update: 2018-08-06 15:50 GMT

ಬೆಂಗಳೂರು, ಆ.6: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಬಂಧಿತ ಇಬ್ಬರು ಆರೋಪಿಗಳಿಗೆ ಮತ್ತೆ 14ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯ ಆದೇಶಿಸಿ, ವೈದ್ಯಕೀಯ ಪರೀಕ್ಷೆಗೆ ಅನುವು ಮಾಡಿಕೊಡಲಾಗಿದೆ.

ಪ್ರಕರಣ ಸಂಬಂಧಪಟ್ಟಂತೆ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾದ ಹಿನ್ನೆಲೆ ಸೋಮವಾರ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಆರೋಪಿಗಳಾದ ಅಮಿತ್ ಬದ್ದಿ ಮತ್ತು ಗಣೇಶ್ ಮಸ್ಕಿನ್ ಅನ್ನು ಹಾಜರು ಪಡಿಸಲಾಯಿತು. ಬಳಿಕ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳನ್ನು ಆ.20ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

ಕಣ್ಣೀರು: ನ್ಯಾಯಾಲಯದಲ್ಲಿ ಆರೋಪಿಗಳಾದ ಅಮಿತ್ ಬದ್ದಿ ಮತ್ತು ಗಣೇಶ್ ಮಸ್ಕಿನ್ ಸಿಟ್ ತನಿಖಾಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಣ್ಣೀರು ಸುರಿಸಿದರು.

ಈ ವೇಳೆ ಆರೋಪಿಗಳ ಪರ ವಕೀಲ ಎನ್.ಪಿ.ಅಮೃತೇಶ್, ಇಬ್ಬರಿಗೂ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶರು, ಆರೋಪಿಗಳಿಬ್ಬರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸುವಂತೆ ಸೂಚಿಸಿದರು.

ಸುಳ್ಳು ಆರೋಪ: ಆರೋಪಿಗಳ ಸುಳ್ಳು ಹೇಳಿದ್ದಾರೆಂದು ಆರೋಪಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಸಿಟ್ ತನಿಖಾಧಿಕಾರಿ ರಂಗಪ್ಪ, ಸರ್ ನಿಮ್ಮ ಮೇಲೆ ನನಗೆ ಗೌರವ ಇದೆ. ಆದರೆ, ಬಂಧಿತರು ವಕೀಲ ಹೇಳಿಕೊಟ್ಟ ಮಾತಿನಂತೆ ಹೇಳಿಕೆ ನೀಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಸತ್ಯವಿಲ್ಲ, ಸಿಟ್ ತನಿಖಾ ತಂಡ ಹಲ್ಲೆ ಮಾಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News