ಶವ ಸುಟ್ಟು ಠಾಣೆಗೆ ಬಂದು ನಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತ !

Update: 2018-08-06 14:23 GMT

ಬೆಂಗಳೂರು, ಆ.6: ರಿಯಲ್ ಎಸ್ಟೇಟ್ ಉದ್ಯಮಿಗಳಿಬ್ಬರ ಹತ್ಯೆ ಪ್ರಕರಣ ಸಂಬಂಧ ಬಂಧಿತ ಪ್ರಮುಖ ಆರೋಪಿ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತ ತೇಜಸ್, ಮೃತ ಕುಟುಂಬಸ್ಥರೊಂದಿಗೆ ಪೊಲೀಸ್ ಠಾಣೆಗೆ ಬಂದು ನಟಿಸುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಜು.28ರಂದು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಬಾಲಾಜಿ, ಪ್ರಸಾದ್‌ ಬಾಬು ಎಂಬುವವರ ಹತ್ಯೆಗೈದ ಪ್ರಕರಣ ಸಂಬಂಧ ಸಾರಕ್ಕಿಯ ನಿವಾಸಿ ಬಿಜೆಪಿ ಕಾರ್ಯಕರ್ತ ಎನ್.ತೇಜಸ್(29), ಅನಿಲ್(29), ಸತೀಶ್(24), ಮಣಿಕಂಠನ್(28), ಆನಂದ(29), ಕೃಷ್ಣ(28), ಹರೀಶ್‌ ಕುಮಾರ್(37), ಮುಖೇಶ್(26), ಬಾಲಾಜಿ(25), ಯವರಾಜು(31) ಎಂಬುವರನ್ನು ಬಂಧಿಸಲಾಗಿದೆ ಎಂದು ನಗರದ ದಕ್ಷಿಣವಿಭಾಗದ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ಹತ್ಯೆಯಾದ ಉದ್ಯಮಿಗಳು ರೌಡಿಶೀಟರ್ ಸೈಕಲ್ ರವಿಯ ಸಹಚರರಾಗಿದ್ದು, ಈತನ ಬಂಧನದ ನಂತರ ಬಾಲಾಜಿ, ಪ್ರಸಾದ್‌ ಬಾಬು ಕಾಣೆಯಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತ ನಂಬಿಸಿದ್ದ. ಅಷ್ಟೇ ಅಲ್ಲದೆ, ಈ ತೇಜಸ್ ಗಿರಿನಗರ ಮತ್ತು ಆರ್‌ಆರ್ ನಗರ ಪೊಲೀಸ್ ಠಾಣೆಗಳಿಗೆ ಕುಟುಂಬದವರೊಂದಿಗೆ ಠಾಣೆಗೆ ಹೋಗಿ, ಕಾಣೆಯಾದ ಉದ್ಯಮಿಗಳ ಮಾಹಿತಿ ನೀಡುವಂತೆ ನಟನೆ ಮಾಡುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

ಶವಗಳನ್ನು ಸುಟ್ಟರು: ಹಣಕಾಸಿನ ವಿಚಾರ ಸಂಬಂಧ ಉದ್ಯಮಿಗಳನ್ನು ಪೂರ್ವನಿಯೋಜನೆಯಿಂದ ಅಂಜನಾಪುರ ಬಳಿಯ ಸಿಮೆಂಟ್ ಗೋಡೌನ್‌ಗೆ ಕರೆಸಿಕೊಂಡು ಪ್ರಮುಖ ಆರೋಪಿ ತೇಜಸ್ ಹಾಗೂ ಆತನ ಸಹಚರರು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಸಿಮೆಂಟ್ ಗೋಡೌನ್‌ನಿಂದ ಮೃತ ವ್ಯಕ್ತಿಗಳನ್ನು ವಾಹನದಲ್ಲಿ ಕನಕಪುರ ರಸ್ತೆಯ ಹಾರೋಹಳ್ಳಿಯ ಪಕ್ಕದಲ್ಲಿರುವ ಕೈಗಾರಿಕಾ ಪ್ರದೇಶದ ಖಾಲಿ ಭೂಮಿಯಲ್ಲಿ ಹಳ್ಳ ತೋಡಿ ಅದರಲ್ಲಿ ಮೃತ ದೇಹಗಳನ್ನು ಹಾಕಿ ಸುಟ್ಟು ಹೂತು ಹಾಕಿರುವುದು, ತನಿಖೆಯಿಂದ ಖಚಿತವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News