ಸಾಲ ಮರುಪಾವತಿ ನೋಟಿಸ್ ಬಗ್ಗೆ ರೈತರು ಆತಂಕಪಡುವ ಅಗತ್ಯವಿಲ್ಲ: ಸಿ.ಎಂ ಕುಮಾರಸ್ವಾಮಿ

Update: 2018-08-06 14:26 GMT

ಬೆಂಗಳೂರು, ಆ. 6: ಸಾಲ ಮರುಪಾವತಿಸುವಂತೆ ಸೂಚಿಸಿ ಬ್ಯಾಂಕ್ ಅಧಿಕಾರಿಗಳು ನೀಡುತ್ತಿರುವ ನೋಟಿಸ್‌ಗೆ ರೈತರು ಆತಂಕಗೊಳ್ಳುವ ಅಗತ್ಯವಿಲ್ಲ. ಶೀಘ್ರದಲ್ಲೇ ಸಾಲಮನ್ನಾ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಭಯ ನೀಡಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರಕಾರ ಸಾಲಮನ್ನಾ ಘೋಷಣೆ ಮಾಡಿದ್ದು, ಸಾಲ ತೀರುವಳಿ ಪತ್ರ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಆತಂಕ ಬೇಡ. ಸರಕಾರ ನಿಮ್ಮೊಂದಿಗಿದೆ ಎಂದು ತಿಳಿಸಿದರು.

ಸಾಲ ಮರುಪಾವತಿಸುವಂತೆ ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡುತ್ತಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದ ಅವರು, ಅವಧಿ ಮುಗಿದರೂ ಸಾಲ ತೀರಿಸಿಲ್ಲ ಎಂಬ ಹಿನ್ನೆಲೆಯಲ್ಲಿ ಬಹುತೇಕ ಬ್ಯಾಂಕಿನವರು ರೈತರಿಗೆ ನೋಟಿಸ್ ನೀಡುತ್ತಿದ್ದಾರೆಂದು ಹೇಳಿದರು.

ಸಾಲ ಬಾಕಿ ಉಳಿಸಿಕೊಂಡಿರುವ ರೈತರಿಗೆ ಬ್ಯಾಂಕ್‌ಗಳು ನೀಡುತ್ತಿರುವ ನೋಟಿಸ್‌ಗಳಿಗೆ ರೈತರು ಗಾಬರಿಯಾಗಬೇಕಾಗಿಲ್ಲ. ಸದ್ಯದಲ್ಲೇ ಸಾಲ ಮನ್ನಾ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಯ ನೀಡಿದರು.

ರೈತರ ಸಾಲಮನ್ನಾಗೆ ಸಂಬಂಧಿಸಿದಂತೆ ಸರಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದ್ದು, ರೈತರಿಗೆ ಅನುಕೂಲವಾಗುವಂತೆ ಸಾಲಮನ್ನಾದ ಆದೇಶ ಸಿದ್ಧವಾಗುತ್ತಿದೆ. ಸದ್ಯದಲ್ಲಿಯೇ ಸಾಲಮನ್ನಾದ ಆದೇಶ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News