×
Ad

ಕೆರೆಗಳ ಸಂರಕ್ಷಣೆಗೆ ಸಮಗ್ರ ಯೋಜನಾ ಪ್ರಸ್ತಾವನೆ ಸಲ್ಲಿಸಿ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-08-06 20:48 IST

ಬೆಂಗಳೂರು, ಆ.6: ರಾಜ್ಯದಲ್ಲಿನ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿ ಪಡಿಸುವ ಕುರಿತು ಸಮಗ್ರ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ.

ಸೋಮವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಹಾಗೂ ಅಭಿವೃದ್ಧಿ ಪ್ರಾಧಿಕಾರದ ರೂಪುರೇಷೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಕೆರೆಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಖುದ್ದು ಆಸಕ್ತಿ ವಹಿಸಲಾಗುವುದು ಎಂದು ಹೇಳಿದರು.

ಕೆರೆಗಳ ಹೂಳೆತ್ತುವ ಹೆಸರಲ್ಲಿ ಅನುದಾನ ದುರುಪಯೋಗ ಆಗಬಾರದು. ಕೆರೆಗಳ ಸಂಗ್ರಹಣಾ ಸಾಮರ್ಥ್ಯ ಹೆಚ್ಚಳ ಆಗಬೇಕು ಎಂದು ಸೂಚನೆ ನೀಡಿದ ಕುಮಾರಸ್ವಾಮಿ, ಅಂತರ್ಜಲ ಸಂರಕ್ಷಣೆ ಉದ್ದೇಶದಿಂದ ಕೆರೆಗಳ ಸಂರಕ್ಷಣೆಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಕಂದಾಯ ಸಚಿವ ಆರ್.ವಿ.ದೇಶಪಾಂಡೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಅರಣ್ಯ ಸಚಿವ ಶಂಕರ್ ಸೇರಿದಂತೆ ವಿವಿಧ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News