×
Ad

ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದು ನಿಲ್ಲಿಸಿ: ಮಾಜಿ ಸಚಿವೆ ಲಲಿತಾ ನಾಯಕ್

Update: 2018-08-06 20:53 IST

ಬೆಂಗಳೂರು, ಆ.6: ರಾಜ್ಯ ಸರಕಾರಕ್ಕೆ ಸರಕಾರಿ ಶಾಲೆಗಳನ್ನು ಸಬಲೀಕರಣ ಮಾಡಬೇಕು ಎಂಬುದಿದ್ದರೆ ರಾಜ್ಯಾದ್ಯಂತ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದನ್ನು ನಿಲ್ಲಿಸಬೇಕು ಹಾಗೂ ಎಲ್ಲ ಖಾಸಗಿ ಶಾಲೆಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಹೇಳಿದ್ದಾರೆ.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಬಹುಜನ ದಲಿತ ಸಂಘರ್ಷ ಸಮಿತಿ ವತಿಯಿಂದ ಆಯೋಜಿಸಿದ್ದ ‘ದುರ್ಬಲಗೊಳಿಸಲ್ಪಟ್ಟ ಸರಕಾರಿ ಶಾಲೆಗಳ ಸಬಲೀಕರಣ’: ರಾಜ್ಯ ಸರಕಾರದ ನಡೆ ಒಂದು ಸಂವಾದದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವುದೇ ಸರಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದಾರೆ. ಹೀಗಾಗಿ, ಸರಕಾರ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು. ಸರಕಾರಿ ಶಾಲೆಗಳ ವ್ಯಾಪ್ತಿಯಲ್ಲಿರುವ ಖಾಸಗಿ ಶಾಲೆಗಳಿಗೆ ಬೀಗ ಜಡಿಯಬೇಕು. ಅದೇ ರೀತಿ, ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು ತಮ್ಮ ಮಕ್ಕಳನ್ನು ಸ್ಥಳೀಯ ಸರಕಾರಿ ಶಾಲಾ-ಕಾಲೇಜುಗಳಲ್ಲಿಯೇ ಶಿಕ್ಷಣ ನೀಡಬೇಕು. ಆಗ ಮಾತ್ರ ಸರಕಾರಿ ಶಾಲೆಗಳ ಪ್ರಗತಿ ಸಾಧ್ಯ ಎಂದು ಲಲಿತಾ ನಾಯಕ್ ಹೇಳಿದರು.

ಸರಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಬೇಕೆಂದು 2007ರಲ್ಲಿ ಕೇಂದ್ರ ಸರಕಾರವು ಶಿಕ್ಷಣ ಸಂಬಂಧ ನೀತಿ ತಂದಿದೆ. ಆದರೆ, ಅದರಲ್ಲಿನ ಕೆಲ ನ್ಯೂನತೆಗಳನ್ನು ಗುರಿಯಾಗಿಸಿಕೊಂಡು ಇದುವರೆಗೂ ಸಂಪೂರ್ಣವಾಗಿ ಜಾರಿ ಮಾಡಿಲ್ಲ. ವಾಸ್ತವವಾಗಿ, ಎಲ್ಲಾ ನೀತಿ-ಕಾನೂನುಗಳಲ್ಲಿ ಕೆಲವು ಲೋಪಗಳಿರುತ್ತವೆ. ಆದರೂ, ಅದರಿಂದ ಶೇ.90ರಷ್ಟು ಭಾಗ ಒಳ್ಳೆಯ ವಿಚಾರಗಳಿರುತ್ತದೆ ಎಂದರು.

ಇತ್ತೀಚಿನ ದಿನಗಳಲ್ಲಿ ಮಾನವೀಯತೆಯನ್ನು ಮರೆತು ಅಮಾನುಷದ ಕಡೆಗೆ ಸಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವೇಳೆ ಅದನ್ನು ತಿಳಿಸುವ, ತಪ್ಪು ಎಂದು ಅರ್ಥ ಮಾಡಿಸುವಂತಹ ಶಿಕ್ಷಣ ವ್ಯವಸ್ಥೆ ನಿರ್ಮಾಣ ಮಾಡಬೇಕಿದೆ. ಪ್ರಾದೇಶಿಕ ಮಟ್ಟದಲ್ಲಿ ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಶಿಕ್ಷಣ ನೀಡಬೇಕು. ಹಿಂದಿನ ದಿನಗಳಲ್ಲಿ ಕಷ್ಟದ ಸಂದರ್ಭದಲ್ಲಿಯೂ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದರು. ಇದೀಗ ಅಂತಹ ಪದ್ಧತಿಯಿಲ್ಲ ಎಂದು ಅವರು ನುಡಿದರು.

ಶಿಕ್ಷಕರಿಗೆ ಹೆಚ್ಚುವರಿ ಕೆಲಸ: ಶಾಲಾ ಶಿಕ್ಷಕರಿಗೆ ಚುನಾವಣೆ ಸೇರಿದಂತೆ ವಿವಿಧ ಇಲಾಖೆಗಳ ಜವಾಬ್ದಾರಿ ನೀಡುವ ಕಾರಣ ಅವರಿಗೆ ಕೆಲಸದ ಒತ್ತಡ ಹೆಚ್ಚಾಗಿದೆ. ಪ್ರತಿ ದಿನ ಅವರೊಂದಿಗೆ ಸಭೆ ನಡೆಸುವುದರಿಂದ ಕಿರಿಕಿರಿ ಉಂಟಾಗುತ್ತಿದೆ. ಇದರಿಂದ ಶಿಕ್ಷಕರನ್ನು ವಿಮುಕ್ತಿಗೊಳಿಸಬೇಕು. ಜೊತೆಗೆ, ಪೂರ್ಣ ಪ್ರಮಾಣದಲ್ಲಿ ಪಠ್ಯ ಬೋಧನೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಬರಹಗಾರ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಬಂಡವಾಳಶಾಹಿಯನ್ನು ಬಲಿಷ್ಠ ಮಾಡುವ ರೀತಿಯಲ್ಲಿ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆ ಬೆಳೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ರಂಗ ಉಳಿದರೆ ಮಾತ್ರ ಸರಕಾರ ಉಳಿಯುತ್ತದೆ. ಆದರೆ, ಇಂದು ಶಿಕ್ಷಣ, ಆರೋಗ್ಯ, ಸಾರಿಗೆ ಸೇರಿದಂತೆ ಎಲ್ಲದರಲ್ಲಿಯೂ ನವ ಬಂಡವಾಳಶಾಹಿ ವ್ಯವಸ್ಥೆ ಪಾದಾರ್ಪಣೆ ಮಾಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಗತಿಕ ಮಟ್ಟದಲ್ಲಿ ಕನ್ನಡಿಗರು ಬೆಳೆಯುವ ನಿಟ್ಟಿನಲ್ಲಿ ಕನ್ನಡ ಬಲವರ್ದನೆಯಾಗಬೇಕು. ಅದಕ್ಕಾಗಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಆದರೆ, ಇಂದಿನ ಸಂದರ್ಭದಲ್ಲಿ ಇಂಗ್ಲಿಷನ್ನು ಆರಾಧಿಸುವ ಮತ್ತು ಕನ್ನಡವನ್ನು ಹೀಯಾಳಿಸುವ ಸ್ಥಿತಿಯಲ್ಲಿದ್ದೇವೆ. ನಮಗೆ ಇಂಗ್ಲಿಷ್‌ನಲ್ಲಿ ಶಿಕ್ಷಣ ನೀಡುವುದು ಬೇಕಿಲ್ಲ. ಬದಲಿಗೆ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಕಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬಹಿಷ್ಕೃತ ಹಿತಕಾರಣದ ಎಚ್.ಆರ್.ಸುರೇಂದ್ರ, ಆರ್. ಕೇಶವಮೂರ್ತಿ, ಆರ್.ಚಂದ್ರಶೇಖರ್, ಸಮಿತಿ ಅಧ್ಯಕ್ಷ ಆರ್.ಎಂ.ಎಸ್.ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News