ಮಾದಕ ಮಾಫಿಯಾಗೆ ಕಡಿವಾಣ ಹಾಕಿ: ಆರ್.ಅಶೋಕ್
ಬೆಂಗಳೂರು, ಆ.6: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ದಂಧೆಯ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಂಡು, ಕಡಿವಾಣ ಹಾಕಬೇಕು ಎಂದು ಶಾಸಕ ಆರ್.ಅಶೋಕ್ ಒತ್ತಾಯಿಸಿದರು.
ಸೋಮವಾರ ನಗರದ ಪೊಲೀಸ್ ಆಯುಕ್ತ ಟಿ.ಸುನೀಲ್‌ಕುಮಾರ್ ಅವರಿಗೆ ನಗರ ವ್ಯಾಪ್ತಿಯಲ್ಲಿ ಮಾದಕ ಜಾಲ ಪತ್ತೆಹಚ್ಚಿ, ಕಾನೂನು ರೀತಿಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಸದಸ್ಯರು ಮನವಿ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೊದಲು ರಾಜಧಾನಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿದ್ದ ಮಾದಕ ಸಂಸ್ಕೃತಿ ಇದೀಗ ರೈಲ್ವೇ ನಿಲ್ದಾಣ, ಗ್ರಾಮೀಣ ಪ್ರದೇಶಕ್ಕೆ ವ್ಯಾಪಿಸಿದೆ. ಅಷ್ಟೇ ಅಲ್ಲದೆ, ಪ್ರತಿ ವರ್ಷವೂ 5 ಲಕ್ಷಕ್ಕೂ ಹೆಚ್ಚು ಮಂದಿ ಈ ಚಟದಿಂದ ಮೃತಪಡುತ್ತಿದ್ದಾರೆ. ಹೀಗಾಗಿ, ಇದರ ವಿರುದ್ಧ ಪೊಲೀಸರು ದಿಟ್ಟ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ್, ಮಾದಕ ಮಾರಾಟಗಾರರ ವಿರುದ್ಧ ಗುಂಡಾ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿಯೇ ಮಾದಕ ತಯಾರಿಕೆ ಜಾಲ ಇದೆ ಎಂದು ಆರೋಪಿಸಿದರು.
ಪ್ರವಾಸ: ಬಿಜೆಪಿಯು ಆ.9 ರಿಂದ ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲು ಮುಂದಾಗಿದ್ದು, ರಾಜ್ಯ ಸರಕಾರದ ವೈಫಲ್ಯಗಳು, ಸಾಲಮನ್ನಾ ಗೊಂದಲ ಸೇರಿದಂತೆ ಅನೇಕ ವೈಫಲ್ಯತೆ ವಿರುದ್ಧ ಜನಜಾಗೃತಿ, ಹೋರಾಟ ನಡೆಸಲಾಗುವುದು ಎಂದು ಅಶೋಕ್ ತಿಳಿಸಿದರು.