×
Ad

ಅನಧಿಕೃತ ಜಾಹೀರಾತು ಫಲಕಗಳ ನಿಷೇಧಕ್ಕೆ ಬಿಬಿಎಂಪಿ ಕೌನ್ಸಿಲ್ ಸಭೆ ನಿರ್ಣಯ

Update: 2018-08-06 21:24 IST

ಬೆಂಗಳೂರು, ಆ.6: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸೌಂದರ್ಯಕ್ಕೆ ಮಾರಕವಾದ ಹಾಗೂ ಕೋಟ್ಯಂತರ ರೂ. ಆದಾಯ ನಷ್ಟವುಂಟು ಮಾಡುತ್ತಿರುವ ಅನಧಿಕೃತ ಜಾಹೀರಾತು ಫಲಕಗಳನ್ನು ನಿಷೇಧಿಸಲು ಬಿಬಿಎಂಪಿ ಕೌನ್ಸಿಲ್ ಸಭೆ ನಿರ್ಣಯ ಕೈಗೊಂಡಿದೆ.

ಇಂದು ನಡೆದ ಸಭೆಯಲ್ಲಿ ನಿರ್ಣಯ ಮಾಡಿದ್ದು, ನಗರದಲ್ಲಿರುವ ಜಾಹೀರಾತು ಫಲಕಗಳ ತೆರವಿಗೆ 15 ದಿನಗಳ ಗಡುವು ನೀಡಲಾಗಿದೆ. ಒಂದು ವೇಳೆ ನಿಯಮ ಮೀರುವವರಿಗೆ 1 ಲಕ್ಷ ರೂ. ದಂಡ ಹಾಗೂ 6 ತಿಂಗಳು ಜೈಲುವಾಸ ವಿಧಿಸಲು ಸಭೆ ಅನುಮೋದಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಅನಧಿಕೃತ ಜಾಹೀರಾತು ಫಲಕಗಳು, ಗ್ಯಾಂಟ್ರಿ, ಗೋಡೆ ಬರಹ ಹಾಗೂ ಭಿತ್ತಿಪತ್ರಗಳಿಂದ ನಗರದ ಅಂದ ಹಾಳಾಗುತ್ತಿದೆ. ಆ ಹಿನ್ನೆಲೆಯಲ್ಲಿ ತತ್‌ಕ್ಷಣದಿಂದ(ಸೋಮವಾರದಿಂದಲೇ) ಜಾರಿಗೆ ಬರುವಂತೆ ಒಂದು ವರ್ಷದ ಅವಧಿಗೆ ಎಲ್ಲ ರೀತಿಯ ಜಾಹೀರಾತು ಪ್ರದರ್ಶನಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಪಾಲಿಕೆ ನಿರ್ಣಯ ಕೈಗೊಂಡಿದೆ.

ನಗರದಲ್ಲಿ ಫ್ಲೆಕ್ಸ್ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಪಾಲಿಕೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್, ಅನಧಿಕೃತ ಜಾಹೀರಾತು ಫಲಕಗಳು, ಫ್ಲೆಕ್ಸ್‌ಗಳ ವಿರುದ್ಧ ಪಾಲಿಕೆಯ ಕ್ರಮ ಹಾಗೂ ಜಾಹೀರಾತು ನೀತಿಯ ಕುರಿತು ಆ.8ರೊಳಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿತ್ತು. ಆ ಹಿನ್ನೆಲೆಯಲ್ಲಿ ಸೋಮವಾರ ಈ ಕುರಿತು ಚರ್ಚಿಸಲು ಮೇಯರ್ ಆರ್.ಸಂಪತ್‌ರಾಜ್ ನೇತೃತ್ವದಲ್ಲಿ ವಿಶೇಷ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎಲ್ಲ ಪಕ್ಷಗಳ ಪಾಲಿಕೆ ಸದಸ್ಯರ ಸಲಹೆ ಮೇರೆಗೆ ನಗರದಲ್ಲಿ ಜಾಹೀರಾತು ನಿಷೇಧ ನಿರ್ಣಯ ಕೈಗೊಳ್ಳಲಾಗಿದ್ದು, ಕೆಂಪೇಗೌಡ ಜಯಂತಿ ಕಾರ್ಯಕ್ರಮ ಮುಗಿದ ನಂತರ ಅನಧಿಕೃತ ಜಾಹೀರಾತು ಫಲಕಗಳ ತೆರವು ಕಾರ್ಯಾಚರಣೆ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಫ್ಲೆಕ್ಸ್ ತೆರವು ಕಾರ್ಯಾಚರಣೆ ಕುರಿತು ಮಾಹಿತಿ ನೀಡಿದ ಆಯುಕ್ತ ಎನ್.ಮಂಜುನಾಥ ಪ್ರಸಾದ್, ಹೈಕೋರ್ಟ್ ಸೂಚನೆ ಮೇರೆಗೆ ಈವರೆಗೆ 21,140 ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದು, 65 ಫ್ಲೆಕ್ಸ್ ಮುದ್ರಣ ಘಟಕಗಳನ್ನು ಮುಚ್ಚಲಾಗಿದೆ. ಕೆಎಂಸಿ ಕಾಯ್ದೆಯ ಉಪವಿಧಿಗಳ ಅನ್ವಯ ಇನ್ನು ಮುಂದೆ ಫ್ಲೆಕ್ಸ್ ಅಳವಡಿಸುವ ಹಾಗೂ ಗೋಡೆ ಮೇಲೆ ಬರೆಯುವವರು 1 ಲಕ್ಷ ರೂ. ದಂಡ ಹಾಗೂ 6 ತಿಂಗಳು ಜೈಲುವಾಸ ಅನುಭವಿಸಬೇಕಾಗುತ್ತದೆ. ಜತೆಗೆ ಸಾರ್ವಜನಿಕ ಸ್ಥಳಗಳು ಹಾಗೂ ಮೈದಾನಗಳ (ಸಂರಕ್ಷಣೆ) ಕಾಯ್ದೆ 1981ರಂತೆ ಅಂತವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದರು.

ಅನಧಿಕೃತ ಜಾಹೀರಾತು ಫಲಕಗಳು: ಕಳೆದ ಒಂದು ವರ್ಷದಿಂದ ಹೊಸ ಫಲಕಗಳ ಅಳವಡಿಕೆ ಹಾಗೂ ಹಳೆಯ ಫಲಕಗಳ ಪರವಾನಿಗೆ ನವೀಕರಣ ಕಾರ್ಯವನ್ನು ಪಾಲಿಕೆಯಿಂದ ಮಾಡಿಲ್ಲ. ಹೀಗಾಗಿ ನಗರದಲ್ಲಿರುವ ಎಲ್ಲ ಜಾಹೀರಾತು ಫಲಕಗಳು ಅನಧಿಕೃತವಾಗಿದ್ದು, ಪಾಲಿಕೆಯಿಂದ ಯಾವುದೇ ಅನುಮತಿ ನೀಡದ ಹಿನ್ನೆಲೆಯಲ್ಲಿ ಯಾಂತ್ರಿಕೃತ ಮಂಜೂರಾತಿ (ಡೀಮ್ಡ್) ಫಲಕಗಳು ಅನಧಿಕೃತವಾಗಿರುತ್ತವೆ. ಈಗಾಗಲೇ ಪಾಲಿಕೆಯಿಂದ 880 ಅನಧಿಕೃತ ಜಾಹೀರಾತು ಫಲಕಗಳನ್ನು ಬುಡ ಸಮೇತವಾಗಿ ತೆರವುಗೊಳಿಸಿದ್ದು, ಇನ್ನೂ 2500ಕ್ಕೂ ಹೆಚ್ಚು ಫಲಕಗಳನ್ನು ತೆರವುಗೊಳಿಸಬೇಕಿದೆ ಎಂದು ಆಯುಕ್ತರು ಮಾಹಿತಿ ನೀಡಿದರು. ಪಾಲಿಕೆಯಿಂದ ಈಗಾಗಲೇ ನೂರಾರು ಏಜೆನ್ಸಿಗಳಿಗೆ 300ಕೋಟಿ ರೂ. ಮೊತ್ತದ ಡಿಮ್ಯಾಂಡ್ ನೋಟಿಸ್ ಜಾರಿಗೊಳಿಸಲಾಗಿದೆ. ಇದೀಗ ಪಾಲಿಕೆಯಿಂದ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸವುದರಿಂದ ಏಜೆನ್ಸಿಗಳು ಬಾಕಿ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪಾಲಿಕೆಗೆ ಬಾಕಿಯಿರುವ ಎಲ್ಲ ಬಾಕಿ ವಸೂಲಿ ಮಾಡುತ್ತೇವೆ ಎಂದು ಮಂಜುನಾಥ ಪ್ರಸಾದ್ ಹೇಳಿದರು.

ಫ್ಲೆಕ್ಸ್ ತೆರವು ಕಾರ್ಯಾಚರಣೆ ಎಂದರೆ ಕೇವಲ ರಾಜಕಾರಣಿಗಳಿಗೆ ಶುಭ ಕೋರುವ ಫ್ಲೆಕ್ಸ್‌ಗಳೆಂದು ಕೆಲವರು ಭಾವಿಸಿದ್ದಾರೆ. ನಗರದ ಕಲ್ಯಾಣ ಮಂಟಪಗಳು, ಮದುವೆ ಬರುವವರಿಗಾಗಿ ಮಾರ್ಗ ಸೂಚಿ ಫ್ಲೆಕ್ಸ್, ಶಾಪಿಂಗ್ ಮಾಲ್, ಕಂಪೆನಿಗಳು, ಶಿಕ್ಷಣ ಸಂಸ್ಥೆಗಳು ಅಳವಡಿಸಿರುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸಬೇಕು ಎಂದು ಮೇಯರ್ ಸಂಪತ್‌ ರಾಜ್ ತಿಳಿಸಿದರು.

ಜಾಹೀರಾತು ನೀತಿ ಮುಂದಕ್ಕೆ: ಬಿಬಿಎಂಪಿಯಲ್ಲಿ ಚರ್ಚೆ ನಡೆಸಿದ್ದ ನೂತನ ಜಾಹೀರಾತು ನೀತಿ ಜಾರಿಗೆ ಸಂಬಂಧಿಸಿದಂತೆ ವಿಸ್ತೃತವಾಗಿ ಚರ್ಚೆಯಾಗಬೇಕಿರುವುದರಿಂದ ನೀತಿ ಅನುಮೋದನೆಗೆ ಹೈಕೋರ್ಟ್ ಕಾಲಾವಕಾಶ ಕೋರಬೇಕು ಎಂದು ಪಾಲಿಕೆ ಸದಸ್ಯರು ಒತ್ತಾಯ ಮಾಡಿದ್ದರಿಂದ, ಮೇಯರ್ ಸಂಪತ್‌ ರಾಜ್, ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ದೆಹಲಿ ಮಾದರಿ ಜಾರಿಗೆ ತನ್ನಿ
ದೇಶದ ರಾಜಧಾನಿ ದೆಹಲಿಯಲ್ಲಿ ಯಾವುದೇ ಜಾಹೀರಾತು ಫಲಕಗಳ ಅಳವಡಿಕೆಗೆ ಅನುಮತಿ ನೀಡಿಲ್ಲ. ಅದೇ ಮಾದರಿಯಲ್ಲಿ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಅದನ್ನು ಜಾರಿಗೊಳಿಸಿದರೆ ನಗರದ ಸೌಂದರ್ಯ ಹೆಚ್ಚಾಗಲಿದೆ. ಒಂದೊಮ್ಮೆ ಉಪವಿಧಿಗಳನ್ನು ಜಾರಿಗೊಳಿಸುವುದಾದರೆ 2011ರಲ್ಲಿ ಬಿಜೆಪಿ ಆಡಳಿತದಲ್ಲಿ ರೂಪಿಸಿದ ಉಪವಿಧಿಗಳನ್ನು ಪರಿಗಣಿಸುವುದು ಸೂಕ್ತ
-ಪದ್ಮನಾಭರೆಡ್ಡಿ , ವಿಪಕ್ಷ ನಾಯಕ

ಜಾಹೀರಾತು ಬೈಲಾ ತಿದ್ದುಪಡಿ ಉಪವಿಧಿಗಳನ್ನು ಜಾರಿಗೊಳಿಸುವ ಮೊದಲ ಸಾರ್ವಜನಿಕರು, ಜಾಹೀರಾತು ಏಜೆನ್ಸಿಗಳೊಂದಿಗೆ ಚರ್ಚಿಸುವುದು ಸೂಕ್ತ. ಜಾಹೀರಾತು ಫಲಕಗಳನ್ನು ನಿಷೇಧಿಸಿದರೆ ಎಷ್ಟು ಜನರು ಕೆಲಸ ಕಳೆದುಕೊಳ್ಳುತ್ತಾರೆ ಎಂಬ ಕುರಿತು ಪರಿಶೀಲಿಸಬೇಕಿದೆ. ಜತೆಗೆ ಪಾಲಿಕೆಯಲ್ಲಿರುವ ಜಾಹೀರಾತು ಉಪವಿಧಿಗಳ ಕುರಿತು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಕಾಂಗ್ರೆಸ್‌ನ ಮಹಮದ್ ರಿಜ್ವಾನ್ ನವಾಬ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News