ವಿವೇಕಾನಂದರ ವಿಚಾರಧಾರೆ ಅರಿಯಿರಿ: ನಿವೃತ್ತ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್

Update: 2018-08-06 16:57 GMT

ಬೆಂಗಳೂರು, ಆ.6: ವಿವೇಕಾನಂದರು ಯುವ ಸಮುದಾಯದ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದರು. ಆದ್ದರಿಂದ ಪ್ರತಿಯೊಬ್ಬರು ಸ್ವಾಮಿ ವಿವೇಕಾನಂದ ವಿಚಾರಧಾರೆಗಳನ್ನು ಅರಿಯಬೇಕು ಎಂದು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ. ಶೈಲೇಂದ್ರ ಕುಮಾರ್ ಹೇಳಿದರು.

ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವಾಮಿ ವಿವೇಕಾನಂದ ವಿಚಾರ ವೇದಿಕೆ ಏರ್ಪಡಿಸಿದ್ದ, ಸ್ವಾಮಿ ವಿವೇಕಾನಂದರ 20ನೆ ವರ್ಷದ ರಾಜ್ಯಮಟ್ಟದ ಸಾಂಸ್ಕೃತಿಕ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಮತ್ತು ಶಾಂತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈ ದೇಶದ ಭವಿಷ್ಯ ಯುವ ಜನತೆಯ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ವಿವೇಕಾನಂದರ ತತ್ವಗಳನ್ನು ಹಾಗೂ ವಿಚಾರಗಳನ್ನು ಅವರಿಗೆ ತಿಳಿಯಪಡಿಸಿ ಉತ್ತಮ ದಿಕ್ಕಿನತ್ತ ತೆಗೆದುಕೊಂಡು ಹೋಗುವಂತ ದಾರಿ ನಿರ್ಮಾಣವಾಗಬೇಕಾಗಿದೆ ಎಂದು ಅವರು ತಿಳಿಸಿದರು.

ಸ್ವಾಮಿ ವಿವೇಕಾನಂದ ಅವರದು ಮೇರು ವ್ಯಕ್ತಿತ್ವ. ಅವರಂತೆ ಇಂದಿನ ವಿದ್ಯಾರ್ಥಿ ಬಳಗ ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದ ಅವರು, ಯಾವುದೇ ಜಾತಿ, ಧರ್ಮದ ಹಂಗಿಲ್ಲದೆ ಪ್ರತಿಭೆಯನ್ನು ಗುರುತಿಸಿ ಪುರಸ್ಕಾರ ನೀಡುವ ವಾತಾವರಣ ನಮ್ಮ ಸುತ್ತಲೂ ಬೆಳೆಯಬೇಕು ಎಂದು ನುಡಿದರು.

ವಿವೇಕಾನಂದ ವಿಚಾರ ಫೌಂಡೇಷನ್ ಮುಖ್ಯಸ್ಥ ಸಿ.ಕೆ.ರವಿಚಂದ್ರ ಮಾತನಾಡಿ, ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಆಗಬೇಕು. ಯುವಕರು ಕಟ್ಟಿದ ವೇದಿಕೆ ಚೇತನದ ಅಡಿಯಲ್ಲಿ ಉತ್ತಮ ಕಾರ್ಯಕ್ರಮಗಳಾಗುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಶಸ್ತಿ ಪ್ರದಾನ:  ಸ್ವಾಮಿ ವಿವೇಕಾನಂದ ವಿಚಾರ ವೇದಿಕೆಯ ಪ್ರಸ್ತುತ ಸಾಲಿನ ವಿವೇಕಾನಂದ ಶಾಂತಿ ಪ್ರಶಸ್ತಿಯನ್ನು ಕೃಷ್ಣ ಎಜುಕೇಷನ್ ಸೊಸೈಟಿ ಅಧ್ಯಕ್ಷ ರುಕ್ಮಾಂಗದ ನಾಯ್ಡು, ಸಿನೆಮಾ ನಿರ್ದೇಶಕ ಸಿ.ವಿ.ಶಿವಶಂಕರ್, ವಕೀಲ ಶ್ರೀನಿವಾಸ್, ಸಮಾಜ ಸೇವಕ ಆರ್.ಪಿ.ಚಂದ್ರಕೀರ್ತಿ ಅವರಿಗೆ ಪ್ರದಾನಿಸಿ, ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ದೇವರಾಜು ಅರಸು ಸಂಶೋಧನ ಕೇಂದ್ರ ನಿರ್ದೇಶಕ ಪ್ರೊ.ಎನ್.ವಿ. ನರಸಿಂಹಯ್ಯ, ವಕೀಲ ಬಿ.ಆರ್.ವಿಶ್ವನಾಥ್, ವೇದಿಕೆಯ ಕಾರ್ಯದರ್ಶಿ ಎಂ.ಸತ್ಯಭಾಮಾ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News