ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಸಂಸ್ಥೆಗಳ ಕೊಡುಗೆ ಅಪಾರ: ಡಿ.ಕೆ.ಶಿವಕುಮಾರ್

Update: 2018-08-06 16:59 GMT

ಬೆಂಗಳೂರು, ಆ.6: ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾದದ್ದು, ಸರಕಾರಗಳು ಮಾಡದೇ ಇರುವಂತಹ ಕೆಲಸವನ್ನು ಖಾಸಗಿ ಸಂಸ್ಥೆಗಳು ಮಾಡುತ್ತಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಮವಾರ ಕೆ.ಆರ್.ಪುರದಲ್ಲಿರುವ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ಬಿ.ಇ.ತರಗತಿಗಳ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯಿಂದ ಬೆಳಕಿನ ಕಡೆಗೆ ಕರೆದೊಯ್ಯುವ ಕೆಲಸ ಕೇಂಬ್ರಿಡ್ಜ್ ಸಂಸ್ಥೆ ಮಾಡುತ್ತಿದೆ. ವಿದ್ಯೆಗಿಂತ ಮಿಗಿಲಾದ ವಸ್ತು ಪ್ರಪಂಚದಲ್ಲಿ ಮತ್ತೊಂದಿಲ್ಲ. ವಿದ್ಯಾವಂತರಾಗಿ ಜೊತೆಗೆ ನಿಮಗೆ ಜನ್ಮ ನೀಡಿದ ತಂದೆ ತಾಯಿಗಳನ್ನು ಗೌರವಿಸಿ ಎಂದು ಅವರು ಹೇಳಿದರು.

ಶಿಕ್ಷಣವನ್ನು ಕಷ್ಟಪಟ್ಟು ಕಲಿಯಿರಿ. ನೀವು ಕೇವಲ ನಾಲ್ಕು ವರ್ಷ ಕಷ್ಟಪಟ್ಟರೆ ಮುಂದಿನ 40 ವರ್ಷಗಳ ಕಾಲ ಸುಖಮಯ ಜೀವನ ನಡೆಸಬಹುದು. ಇಂದು ಬೆಂಗಳೂರು ಪ್ರಪಂಚದ ಆಕರ್ಷಣೆಯ ಕೇಂದ್ರವಾಗಿದ್ದು, ಇಡೀ ಜಗತ್ತೇ ಇತ್ತ ನೋಡುವಂತಾಗಿದೆ. ಇಂತಹ ನಗರದಲ್ಲಿರುವ ಓದುತ್ತಿರುವ ನೀವೇ ಧನ್ಯರು ಎಂದು ಶಿವಕುಮಾರ್ ತಿಳಿಸಿದರು.

ವಿದ್ಯಾರ್ಥಿ ಜೀವನದಲ್ಲಿ ದೊಡ್ಡದಾಗಿ ಕನಸು ಕಾಣಿರಿ, ಏನನ್ನಾದರೂ ಸಾಧಿಸುವ ಗುರಿಯನ್ನು ಹೊಂದಿರಿ, ನೀವು ಯಾವುದೇ ಎತ್ತರಕ್ಕೇರಿದರೂ ನಿಮ್ಮ ಪೋಷಕರನ್ನು, ಶಿಕ್ಷಕರನ್ನು ಮರೆಯದಿರಿ. ಇದೇ ನೀವು ನಿಮ್ಮ ತಂದೆ ತಾಯಿ ಹಾಗೂ ಗುರುಗಳಿಗೆ ಕೊಡುವ ಕಾಣಿಕೆ ಎಂದು ಅವರು ಹೇಳಿದರು.

ನಾನು ಇಂಜಿನಿಯರ್ ಆಗಬೇಕೆಂದು ನನ್ನ ತಂದೆ ಬಯಸಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಅವರ ಕನಸನ್ನು ನನಸು ಮಾಡಲು ಸಾವಿರಾರು ಮಕ್ಕಳನ್ನು ಇಂಜಿನಿಯರ್‌ಗಳನ್ನಾಗಿಸುವ ಕಾಲೇಜು ಸ್ಥಾಪಿಸಿದ್ದೇನೆ. ಎಸ್.ಎಂ.ಕೃಷ್ಣ ಸರಕಾರದಲ್ಲಿ ನಾನು ಮೊಟ್ಟಮೊದಲ ಬಾರಿಗೆ ಸಚಿವನಾದೆ. ಆದರೆ, ಮೈಸೂರು ಮುಕ್ತ ವಿವಿಯಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಾಗ ಆದ ಸಂತೋಷ, ಸಚಿವನಾದಾಗ ಆಗಿರಲಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ಬೆಂಗಳೂರು ತಂತ್ರಜ್ಞಾನ, ವಿಜ್ಞಾನ, ಮಾಹಿತಿ ತಂತ್ರಜ್ಞಾನ, ಮಾನವ ಸಂಪನ್ಮೂಲ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ವಿದ್ಯಾರ್ಥಿಗಳು ಇಲ್ಲಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿರುವವರು ಇಂದು ವಿಶ್ವದ ಅನೇಕ ದೇಶಗಳಲ್ಲಿ ಉತ್ತಮ ಸ್ಥಾನಮಾನ ಹೊಂದಿದ್ದಾರೆ ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಒಬ್ಬರೇ ಓದದೆ, ಗುಂಪು ಚರ್ಚೆಗಳಲ್ಲಿ ಪಾಲ್ಗೊಳ್ಳುವುದರಿಂದ, ಪರಸ್ಪರ ವಿಚಾರ ವಿನಿಮಯ, ಚಿಂತನೆಗಳು ನಡೆಸಲು ಸಹಕಾರಿಯಾಗುತ್ತದೆ. ಈ ಬಗ್ಗೆ ಎಲ್ಲರೂ ಗಮನ ಹರಿಸಬೇಕು ಎಂದು ಶಿವಕುಮಾರ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಿ.ಕೆ.ಮೋಹನ್, ಟಿಸಿಎಸ್ ಸಂಸ್ಥೆಯ ಸಂಪನ್ಮೂಲ ನಿರ್ವಹಣಾ ವಿಭಾಗದ ಮುಖ್ಯಸ್ಥ ಇ.ಎಸ್.ಚಕ್ರವರ್ತಿ, ಮೈಸೂರಿನ ಅಮ್‌ಕ್ಯಾಡ್ ಸಂಸ್ಥೆಯ ನಿರ್ದೇಶಕ ಚೇತನ್ ರಾಮ್, ಕೇಂಬ್ರಿಡ್ಜ್ ಕಾಲೇಜಿನ ಪ್ರಾಂಶುಪಾಲ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News