ಸ್ವಂತಿಕೆಯ ಪರೀಕ್ಷೆ

Update: 2018-08-07 07:07 GMT

ಶಿಕ್ಷಣ ಸಚಿವ ಎನ್.ಮಹೇಶ್ ಅವರ ತೆರೆದ ಪುಸ್ತಕ ಪರೀಕ್ಷೆಯ ಪ್ರಸ್ತಾವದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ತೆರೆದ ಪುಸ್ತಕ ಪರೀಕ್ಷೆಯನ್ನು ಅದಾಗಲೇ ಬರೆದ ನನ್ನ ಅನುಭವವನ್ನು ನಾನು ಇಲ್ಲಿ ಹೇಳಲು ಇಚ್ಛಿಸುತ್ತೇನೆ.

2005ನೇ ಇಸವಿಯಲ್ಲಿ ನಾನು International Air Travelling Association(IATA)ನ  ಕೋರ್ಸ್ ಗೆ ಸೇರಿಕೊಂಡಿದ್ದೆ, ಇದು ಕೆನಡಾ ಮೂಲದ ಪಠ್ಯವಾಗಿದ್ದು, ಸರ್ಟಿಫಿಕೇಟ್‌ಗಳು ಮಾಂಟ್ರಿಯಲ್‌ನಿಂದಲೇ ಬರುತ್ತದೆ. ಆದರೆ ಪರೀಕ್ಷೆಯ ವಿಶೇಷತೆ ಏನೆಂದರೆ ಅದರ ಎರಡೂ ಪರೀಕ್ಷೆಗಳಿಗೆ ನಾವು ಯಾವುದೇ ಪುಸ್ತಕಗಳನ್ನು ತೆಗೆದುಕೊಂಡು ಹೋಗಬಹುದು. ಒಂದೇಕೆ ನೂರು ಚೀಟಿಗಳನ್ನೂ ಇಡಬಹುದು. ಆದರೆ ಕನಿಷ್ಠ ತೇರ್ಗಡೆಗೆ ಅಂಕ ಶೇ.70 ಆಗಿತ್ತು. ಮೊದಲಿಗೆ ಖುಷಿಯಿಂದ ಕುಣಿದರೂ ತರಗತಿಗಳಲ್ಲಿ ನಡೆಯುತ್ತಿದ್ದ ಕಿರು ಪರೀಕ್ಷೆಗಳಲ್ಲಿ ನಮಗೆ ತಿಳಿದು ಹೋಯಿತು, ಪಠ್ಯ ಪುಸ್ತಕವನ್ನು ಓದದೆ ನಮಗೆ ಅದು ಪರೀಕ್ಷಾ ಹಾಲ್‌ನಲ್ಲಿ ದಕ್ಕಲಿಕ್ಕಿಲ್ಲ ಎನ್ನುವುದು.

ಹಾಗಾಗಿ ಯಾವ ಪ್ರಶ್ನೆಗಳಿಗೆ, ಯಾವ ಪುಟದಲ್ಲಿ, ಎಲ್ಲಿ ಉತ್ತರ ಇದೆ ಎನ್ನುವುದನ್ನು ತಿಳಿಯಲಿಕ್ಕಾದರೂ ಪುಸ್ತಕಗಳನ್ನು ಓದಬೇಕಾಯಿತು. ಜತೆಗೆ ಉತ್ತರ ಹುಡುಕಲು ಅನುವಾಗುವಂತೆ ಅದರ ಕೀ ವರ್ಡ್‌ಗಳಿಗೆ ಗುರುತು ಮಾಡಿಕೊಳ್ಳುವುದು, ನೇರ ಪ್ರಶ್ನೆಗಳು ಬರುವುದಿಲ್ಲ ಎಂದು ಅದಾಗಲೇ ಮನವರಿಕೆಯಾದ್ದರಿಂದ ಅಲ್ಲಲ್ಲಿ ನಮ್ಮದೇ ಟಿಪ್ಪಣಿಗಳನ್ನು ಬರೆಯುವುದು, ಪ್ರಮುಖ ಪುಟಗಳ ಮೇಲೆ ಸಂಭ್ಯಾವ ಪ್ರಶ್ನೆಗಳಿಗೆ ‘‘ಇಲ್ಲಿ ಉತ್ತರ ಇದೆ’’ -ಎಂಬ ಸೂಚನಾ ಬರಹಗಳು (ಸಮಯ ಉಳಿಸಲು) ಎಲ್ಲವನ್ನು ಮಾಡಿದೆವು. ನಮಗಿದ್ದ ನಿಯತ್ತು ಒಂದೇ, ಈ ಸುವರ್ಣಾವಕಾಶವನ್ನು ಬಿಡಬಾರದು ಎನ್ನುವುದು. ಆದರೆ ಇಷ್ಟೆಲ್ಲಾ ಕಸರತ್ತು ಮಾಡುವಷ್ಟರಲ್ಲಿ ಆ ಪಠ್ಯವನ್ನು ಅದಾಗಲೇ 5-6 ಬಾರಿ ಓದಿ ಆಗಿತ್ತು. ಅಷ್ಟರಲ್ಲಿ ನಾವು ಆ ಪಠ್ಯಗಳನ್ನು ಸ್ವಂತ ಮಾಡಿಕೊಂಡಿದ್ದೆವು! ಅದೂ ನಮಗರಿವಿಲ್ಲದೆ. ಇದಕ್ಕೆ ವಿರುದ್ಧವಾಗಿ ನಾವು ಮಾಮೂಲು ಪರೀಕ್ಷೆಗಳಲ್ಲಿ ಪಠ್ಯ ಪುಸ್ತಕದೊಳಗೆ ಏನಿದೆ ಎನ್ನುವತ್ತ ತಿರುಗಿಯೂ ನೋಡುತ್ತಿರಲಿಲ್ಲ. ಒಂದು ವೇಳೆ ಅವುಗಳ ಸಂದೇಶವೇನು? ಲೇಖಕಿ ಸಮಸ್ಯೆಯತ್ತ ಹೇಗೆ ಬೆಳಕು ಚೆಲ್ಲಿದ್ದಾರೆ? ಈ ಬಗ್ಗೆ ನಿಮ್ಮ ನಿಲುವು ಏನು ಎಂದು ಕೇಳಿದರೆ ನಮ್ಮ ನಿಲುವನ್ನು ಶಿಕ್ಷಕರು ಅದಾಗಲೇ ಹೇಳಿಕೊಡುವ ಕಾರಣ, ಪ್ರಶ್ನೆಗಳನ್ನು ಹಾಗೆಯೇ ಬಿಟ್ಟು ಬಂದು ಆ ಪ್ರಶ್ನೆಗೆ ಉತ್ತರ ಬರೆಸದ ಬಗ್ಗೆ ಶಿಕ್ಷಕರ ಮೇಲೆಯೇ ದೂರು ಹಾಕುತ್ತಿದ್ದೆವು.

ಶಿಕ್ಷಕಕರು ಅಷ್ಟೇ ಸಮ್ಮತಿಯಿಂದ ‘‘ಈ ಸಲ ಪ್ರಶ್ನೆಗಳನ್ನು ತುಂಬಾ ಟ್ವಿಸ್ಟ್ ಮಾಡಿ ಕೊಟ್ಟಿದ್ದಾರೆ’’ ಎನ್ನುತ್ತಿದ್ದರು. ಆದರೆ ಅದರ ಒಟ್ಟು ದೋಷವಿರುವುದು ನಾವು ಪಠ್ಯಪುಸ್ತಕಗಳನ್ನು ಸರಿಯಾಗಿ ಸ್ವೀಕರಿಸದೇ ಕೇಳಿದ ಪ್ರಶ್ನೆಗಳಿಗೆ ಮಾತ್ರ ಉತ್ತರ ಹುಡುಕಿದುದರಲ್ಲಿ ಎಂದು ಯಾರೂ ಹೇಳಿದ ನೆನಪಿಲ್ಲ. ಅಲ್ಲದೆ ಉರು ಹೊಡೆದು ಕಾರುವ ಪರೀಕ್ಷಾ ಪದ್ಧತಿಯಲ್ಲಿ ಮಕ್ಕಳಿಗೆ ಸ್ವಂತಿಕೆಗೆ ಅವಕಾಶವೇ ಇಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಏನೆಂದರೆ ಸಣ್ಣಂದಿನಲ್ಲಿ ವಿಭಕ್ತಿ ಪ್ರತ್ಯಯಗಳಿಗೆ (ಉ, ಅನ್ನು, ಇಂದ ...) ಜೋಡಿಸಲು ಇದ್ದ ಏಕೈಕ ವ್ಯಕ್ತಿ ರಾಮ. ಹೆಚ್ಚಿನವರು ಅದನ್ನೇ ಓದಿರುತ್ತೀರಿ.

ಆದರೆ ಇತ್ತೀಚೆಗೆ ರಾಜ್ಯದ ಪ್ರತಿಷ್ಠಿತ ಪರೀಕ್ಷೆಯೊಂದರ ಕನ್ನಡ ಸಾಹಿತ್ಯ ಐಚ್ಛಿಕ ಪರೀಕ್ಷೆಯ, ಬೋಧಕರೇ ಬರೆದ ನೋಟ್ಸ್ ಒಂದನ್ನು ಓದಿದಾಗ ಕನ್ನಡ ವ್ಯಾಕರಣ ವಿಭಾಗಗಳಲ್ಲಿ ಅದೇ ರಾಮನನ್ನೂ ನೋಡಿ ತೀರಾ ಖೇದವೆನಿಸಿತ್ತು, ಕ್ಷಮಿಸಿ ಅಲ್ಲಿ ರಹೀಮನನ್ನು ಹಾಕಬೇಕಿತ್ತು ಎನ್ನುವುದು ನನ್ನ ಉದ್ದೇಶವಲ್ಲ. ರಾಮನ ಬದಲಿಗೆ ಭೀಮ ಎಂದೂ ಬರೆಯಲು ಯೋಚಿಸದಂತೆ, ನಮ್ಮ ಸ್ವಂತಿಕೆಯನ್ನು ಅಡವಿಟ್ಟಂತೆ ಈ ಕಲಿಕಾ ಪ್ರಕ್ರಿಯೆಯಲ್ಲಿ ವ್ಯವಹರಿಸುವುದರ ಹಿಂದಿನ ಉದ್ದೇಶವೇನು? ಉದಾಹರಣೆಯೊಂದರ ಹೆಸರನ್ನು ಬದಲಾಯಿಸುವ ಸಣ್ಣ ನಿರ್ಧಾರವನ್ನೂ ತೆಗೆದುಕೊಳ್ಳದಂತೆ ನಮ್ಮನ್ನು ಗುಲಾಮರನ್ನಾಗಿ ಮಾಡಿದರು ಯಾರು? ಹಾಗೆಯೇ ತೆರೆದ ಪರೀಕ್ಷೆಯಲ್ಲಿರುವ ಇನ್ನೊಂದು ಅಂಶವೆಂದರೆ ಅಲ್ಲಿ ಪುಸ್ತಕ ತೆರೆದು ನೋಡುತ್ತಾ ಕೂರಲು ಹೆಚ್ಚಿನ ಸಮಯವನ್ನೇನೂ ಕೊಡುವುದಿಲ್ಲ. ಆದರೆ ತೇರ್ಗಡೆಯ ಮಿತಿಯನ್ನು ಏರಿಸಿರುತ್ತಾರೆ.

ಉದಾ: 100ರಲ್ಲಿ 50 ಕನಿಷ್ಠ ಅಂಕಗಳು. ಹಾಗಿರುವಾಗ ತೀರಾ ತಿಳಿದಿಲ್ಲದ ಪ್ರಶ್ನೆಗಳಿಗೆ ಮಾತ್ರ ಪುಸ್ತಕ ತೆರೆಯುವ ಅವಕಾಶ ಸಿಗುತ್ತದೆ. ಅದೂ ಪಠ್ಯ ಪುಸ್ತಕದಲ್ಲಿ ಪಳಗಿದ್ದರೆ ಮಾತ್ರ. ಆ ಕಾರಣಕ್ಕಾಗಿಯೇ ಒಟ್ಟು 60 ಮಂದಿಯಲ್ಲಿ ನಾವು ಎಳೆಂಟು ಮಂದಿ ಮಾತ್ರ ಪಾಸಾಗಿದ್ದೇವೆ. (ತೆರೆದ ಪುಸ್ತಕ ಪರೀಕ್ಷೆಯನ್ನು ಲಘುವಾಗಿ ಸ್ವೀಕರಿಸಿದ ಕಾರಣ) ಈ ಪುಸ್ತಕದಲ್ಲಿ ಹೊಸತೊಂದು ವ್ಯವಸ್ಥೆಗೆ ಹೊರಳಬೇಕಾದುದರಲ್ಲಿ ಆತಂಕವಿರುವುದು ಅದಾಗಲೇ ಮುಚ್ಚಿದ ಪರೀಕ್ಷೆಯಲ್ಲಿ ಬೆಳೆದು ಬಂದ ಹಿರಿಯರಿಗೆ, ಶಿಕ್ಷಕರಿಗೆ, ಮೌಲ್ಯಮಾಪಕರಿಗೆ ಮತ್ತು ಒಟ್ಟು ವ್ಯವಸ್ಥೆಗೆ. ಯಾಕೆಂದರೆ ಅಮೂಲ್ಯವಾದ ಮೆದುಳನ್ನು ಸರಿಯಾಗಿ, ಸಮರ್ಪಕವಾಗಿ ಬಳಸದೆಯೇ, ಹಾಗೆಯೇ ಅದನ್ನು ರಕ್ಷಿಸುತ್ತಾ ಬಂದವರು ನಾವು.

ಹಾಗಾಗಿ ಇಲ್ಲಿಯೂ ಅಷ್ಟು ಬೇಗನೇ ಬಳಸುವುದು ಶಕ್ಯವಾಗುವುದಿಲ್ಲ. ಆದರೆ ಮಕ್ಕಳು ಕೆಲ ಪ್ರಾರಂಭಿಕ ಅಡಚಣೆಗಳು, ತೊಂದರೆಯನ್ನು ಅನುಭವಿಸಿದರೂ, ದೀರ್ಘ ಕಾಲೀನವಾಗಿ ಶಿಕ್ಷಣದ ನೈಜ ಉದ್ದೇಶವನ್ನು ಸಾಧಿಸಲು ಸಫಲರಾಗಬಲ್ಲರು. ಅಂದರೆ ನಿಜ ಜೀವನದಲ್ಲೂ ಒಂದು ಸಂದರ್ಭವನ್ನು ಸರಿಯಾಗಿ, ಇಡಿಯಾಗಿ ಗ್ರಹಿಸುವುದು, ಸನ್ನಿವೇಶಗಳಿಗೆ ತಕ್ಕಂತೆ ತಮ್ಮ ಅಭಿಪ್ರಾಯಗಳನ್ನು ರೂಪಿಸುವ, ಪ್ರತಿಕ್ರಿಯಿಸುವ, ನಿರ್ಧಾರ ತೆಗೆದುಕೊಳ್ಳುವ, ಎದುರಿನವನ ಅನಿರೀಕ್ಷಿತ ಕೇಳಿಕೆಗಳನ್ನು ಅರ್ಥ ಮಡಿಕೊಂಡು ಆ ಪ್ರಕಾರವೇ ನಮ್ಮ ನಡೆಯನ್ನು ರೂಪಿಸುವ, ಸನ್ನಿವೇಶ ನೀಡುತ್ತಿರುವ ಸಂದೇಶವೇನು? ಅದರ ಒಳದನಿಯೇನು? ಮುಂತಾದ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಒಂದು ಭಾವನಾತ್ಮಕ ಬುದ್ಧ್ದಿ ಮತ್ತೆಯನ್ನು ನಿಧಾನವಾಗಿ ರೂಪಿಸಿಕೊಳ್ಳಬಲ್ಲರು. ಪರೀಕ್ಷೆ ಬರೆದಾಗ ಅಲ್ಲ ಬದಲಿಗೆ ಪಠ್ಯವನ್ನು ಗ್ರಹಿಸಿ ಪರೀಕ್ಷೆಗೆ ಸಿದ್ಧರಾಗುವ ಒಂದು ಪ್ರಕ್ರಿಯೆಯ ಜೊತೆ ಜೊತೆಗೆ ಇದು ಸಾಧಿತವಾಗುತ್ತದೆ.

ಶಿಕ್ಷಣದ ಪ್ರಧಾನ ಉದ್ದೇಶವೇ ವಿವೇಚನೆ ಬೆಳೆಸಿಕೊಳ್ಳುವುದಾಗಿರುವಾಗ ಬರಿದೆ ಅಂಕಗಳನ್ನು ಕೊಟ್ಟು ಕಣ್ಕಟ್ಟಿ ಮಾರುಟ್ಟೆಗೆ ಬಿಡುವಂತಹ ಪುಸ್ತಕ ವ್ಯವಸ್ಥೆಗಿಂತ ಉರು ಹೊಡೆದು ‘ಸಂದರ್ಭ ಸಹಿತ ವಿವರಿಸಿರಿ’ಗಿಂತ ಸಂದರ್ಭಕ್ಕೆ ತಕ್ಕಂತೆ ವ್ಯವಹರಿಸಿ ನಮೂನೆಯ ಕಲಿಕೆ ನಿಜಕ್ಕೂ ಸ್ವೀಕಾರಾರ್ಹವಾದುದು. ಆದರೆ ಅಂತಿಮವಾದುದು ಎನ್ನುವಂತಿಲ್ಲ.

ಈ ಬದುಕೇ ಒಂದು ತೆರದ ಪರೀಕ್ಷೆಯಲ್ಲವೇ? ಇದನ್ನು ಎದುರಿಸಲು ಪೂರ್ವಭಾವಿಯಾಗಿ ಮಕ್ಕಳನ್ನು ಅದಕ್ಕೆ ಸಿದ್ಧಗೊಳಿಸುವುದು ಸರಿಯಾದ ಕ್ರಮವಾಗಿದೆ. ಪ್ರಾರಂಭದಲ್ಲಿ ಗೊಂದಲಗಳಿದ್ದರೂ ಒಟ್ಟಿನಲ್ಲಿ ಪ್ರಸ್ತಾಪವು ಬಹಳ ಕ್ರಾಂತಿಕಾರಿ ಹೆಜ್ಜೆಯಾಗಿ ಒಟ್ಟು ಕಲಿಕಾ ಪ್ರಕ್ರಿಯೆಯನ್ನೇ ಸ್ವಂತಿಕೆಯಡೆಗೆ ತೆರೆದಂತಾಗುತ್ತದೆ.

ಹಾಗಾಗಿ ಶಿಕ್ಷಣ ತಜ್ಞರು, ಮೇಧಾವಿಗಳು, ಚಿಂತಕರು ಚರ್ಚೆಯನ್ನು ತಣಿಯ ಬಿಡದೆ ವಿದೇಶಗಳಲ್ಲಿರುವ ಶಿಕ್ಷಣ ವ್ಯವಸ್ಥೆಯ ಅಧ್ಯಯನ ನಡೆಸಿ, ಹೆಜ್ಜೆಗಳನ್ನು ಮುಂದಿಟ್ಟರೆ ಬಹಳ ಒಳ್ಳೆಯದಿತ್ತು. ಕೆಲವು ಅಡ್ಡಿ ಆತಂಕಗಳಿರಬಹುದು. ಇರಲಿ. ನಡೆದವರೆಡವರಲ್ಲದೆ, ಕುಳಿತವರೆಡವರೇ?
ತಲೆಯನ್ನು ಮೂಲೆಯಲ್ಲಿಟ್ಟು, ಯಾರೋ ಹೇಳಿದುದನ್ನು, ಹೇಗೆ ಹೇಗೋ ಸ್ವೀಕರಿಸಿ ಮಸೆಯುತ್ತಿರುವ ಯುವ ಸಮುದಾಯದ ಅಪಸವ್ಯಗಳನ್ನು ಸಹಿಸಲಾಗುತ್ತಿಲ್ಲ. ಮನಸ್ಸುಗಳು ತೆರೆಯಲಿ. ಅಷ್ಟಾದರೂ ಲಾಭವಾಗಲಿ. ಪ್ರಸ್ತಾಪ ಮೂಲೆ ಸೇರದಿರಲಿ.

Similar News