ಸಾಸಿವೆಯನ್ನು ಅಗಿಯುತ್ತಿದ್ದರೆ ಏನಾಗುತ್ತದೆ....?

Update: 2018-08-07 10:02 GMT

ಭಾರತೀಯ ಅಡಿಗೆಯಲ್ಲಿ ಸಾಸಿವೆ ವ್ಯಾಪಕವಾಗಿ ಬಳಕೆಯಾಗುತ್ತದೆ. ಸಾಸಿವೆ ಇಲ್ಲದೆ ಒಗ್ಗರಣೆ ಬೀಳುವುದೇ ಇಲ್ಲ. ಆದರೆ ಸಾಸಿವೆಯನ್ನು ಹಾಗೆಯೇ ಬಾಯಿಯಲ್ಲಿ ಹಾಕಿಕೊಂಡು ಅಗಿಯುತ್ತಿದ್ದರೆ ದೊರೆಯುವ ಆರೋಗ್ಯಲಾಭಗಳು ಹೆಚ್ಚಿನವರಿಗೆ ಗೊತ್ತಿಲ್ಲ.

 ಸಾಸಿವೆಯು ಆರೋಗ್ಯವನ್ನು ಹೆಚ್ಚಿಸುವ ಗ್ಲುಕೊಸಿನೊಲೇಟ್ ಎಂಬ ನೈಸರ್ಗಿಕ ಘಟಕವನ್ನು ಒಳಗೊಂಡಿದೆ. ಸಾಸಿವೆಯಲ್ಲಿರುವ ಕಿಣ್ವಗಳಿಂದ ಈ ಸಂಯುಕ್ತವು ವಿಭಜಿಸಲ್ಪಡುವುದು ಅದರ ತೀಕ್ಷ್ಣ ಪರಿಮಳಕ್ಕೆ ಕಾರಣವಾಗಿದೆ.

ಸಾಸಿವೆಯಲ್ಲಿರುವ ಸಂಯುಕ್ತಗಳು ವಿಶೇಷವಾಗಿ ಕರುಳಿನಲ್ಲಿ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ. ಅದು ಒಮೆಗಾ-3 ಫ್ಯಾಟಿ ಆ್ಯಸಿಡ್, ಸೆಲೆನಿಯಂ, ಮ್ಯಾಂಗನೀಸ್, ಮ್ಯಾಗ್ನೇಷಿಯಂ,ವಿಟಾಮಿನ್ ಬಿ1, ರಂಜಕ, ಕ್ಯಾಲ್ಸಿಯಂ,ಪ್ರೋಟಿನ್,ನಾರು ಮತ್ತು ಸತುವು ಇವುಗಳ ಸಮೃದ್ಧ ಮೂಲವಾಗಿದೆ.

ಸಾಸಿವೆಯನ್ನು ಅಗಿಯುವುದರಿಂದ ದೊರೆಯುವ ಆರೋಗ್ಯಲಾಭಗಳು ಹೀಗಿವೆ...

► ತೂಕ ಇಳಿಸಿಕೊಳ್ಳಲು ಸಹಕಾರಿ

ಸಾಸಿವೆ ಕಾಳುಗಳಲ್ಲಿ ಕ್ಯಾಲರಿಗಳು ಕಡಿಮೆ ಪ್ರಮಾಣದಲ್ಲಿರುವುದರಿಂದ ಶರೀರದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತವೆ. ಒಂದು ಟೇಬಲ್ ಸ್ಪೂನ್‌ನಷ್ಟು ಸಾಸಿವೆಯಲ್ಲಿ ಕೇವಲ 32 ಕ್ಯಾಲರಿಗಳಿರುತ್ತವೆ. ಇದು ಇತರ ಕೆಲವು ಸಾಂಬಾರ ಪದಾರ್ಥಗಳಲ್ಲಿರುವ ಪ್ರಮಾಣಕ್ಕಿಂತ ಕಡಿಮೆಯಾಗಿದೆ. ಕಾರ್ಬೊಹೈಡ್ರೇಟ್ ಕೂಡ ಕಡಿಮೆಯಿದ್ದು,ಒಂದು ಟೇಬಲ್‌ಸ್ಪೂನ್ ಸಾಸಿವೆಯಲ್ಲಿ ಕೇವಲ 1.8 ಗ್ರಾಮ್‌ನಷ್ಟಿರುತ್ತದೆ.

► ಉರಿಯೂತ ನಿರೋಧಕ ಗುಣವನ್ನು ಹೊಂದಿದೆ

ಸಾಸಿವೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಸೆಲೆನಿಯಂ ಅಸ್ತಮಾ ಮತ್ತು ರುಮಟಾಯ್ಡಿ ಸಂಧಿವಾತದ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಅದರಲ್ಲಿರುವ ಮ್ಯಾಗ್ನೇಷಿಯಂ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುವ ಜೊತೆಗೆ ಋತುಬಂಧವಾಗಿರುವ ಮಹಿಳೆಯರಲ್ಲಿಯ ನಿದ್ರಾಹೀನತೆಯ ತೊದರೆಯನ್ನು ನಿವಾರಿಸುತ್ತದೆ. ಅಲ್ಲದೆ ಮೈಗ್ರೇನ್ ತಲೆನೋವು ಆಗಾಗ್ಗೆ ಕಾಣಿಸಿಕೊಳ್ಳುವುದನ್ನು ತಡೆಯುತ್ತದೆ.

► ಸೋರಿಯಾಸಿಸ್‌ಗೆ ಚಿಕಿತ್ಸೆ

ಒಂದು ವಿಧದ ಚರ್ಮರೋಗವಾಗಿರುವ ಸೋರಿಯಾಸಿಸ್ ತೀವ್ರ ಉರಿಯೂತದ ಸ್ವಪ್ರತಿರಕ್ಷಿತ ಕಾಯಿಲೆಯಾಗಿದೆ. ಸಾಸಿವೆಯು ಸೋರಿಯಾಸಿಸ್‌ಗೆ ಸಂಬಂಧಿಸಿದ ಉರಿಯೂತಕ್ಕೆ ಮತ್ತು ಗಾಯಗಳಿಗೆ ಚಿಕಿತ್ಸೆ ನೀಡುತ್ತದೆ. ಅದು ಸೋರಿಯಾಸಿಸ್ ಸೇರಿದಂತೆ ಯಾವುದೇ ಕಾಯಿಲೆಯ ವಿರುದ್ಧ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೂಪರ್-ಆಕ್ಸಡ್ ಡಿಸ್ಮುಟೇಸ್‌ನಂತಹ ಆರೋಗ್ಯಕರ ಕಿಣ್ವಗಳ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ.

► ಉಸಿರಾಟದ ತೊಂದರೆಯನ್ನು ನಿವಾರಿಸುತ್ತದೆ

ಶೀತ ಮತ್ತು ಫ್ಲೂ ಅನ್ನು ಪರಿಣಾಮಕಾರಿಯಾಗಿ ಶಮನಿಸುತ್ತದೆ ಎನ್ನುವುದು ಸಾಸಿವೆಯನ್ನು ಅಗಿಯುವುದರಿಂದ ದೊರೆಯುವ ಇನ್ನೊಂದು ಆರೋಗ್ಯಲಾಭವಾಗಿದೆ. ಅದು ಶ್ವಾಸನಾಳದಲ್ಲಿನ ಲೋಳೆಯನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ನಿಮಗೆ ಉಸಿರಾಟದ ತೊಂದರೆಯಿದ್ದರೆ ಸಾಸಿವೆ ಕಾಳುಗಳನ್ನು ಅಗಿದು ನೋಡಿ.

► ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಸಾಸಿವೆ ನಾರಿನ ಉತ್ತಮ ಮೂಲವಾಗಿದೆ. ನಾರು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಜೊತೆಗೆ ಜೀರ್ಣ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಅದು ಕರುಳಿನ ಚಲನವಲನವನ್ನು ಉತ್ತಮಗೊಳಿಸುವ ಮೂಲಕ ಶರೀರದ ಒಟ್ಟಾರೆ ಚಯಾಪಚಯವನ್ನು ಹೆಚ್ಚಿಸುತ್ತದೆ.

► ಋತುಬಂಧದ ಸಮಸ್ಯೆಗಳಿಂದ ನೆಮ್ಮದಿ ನೀಡುತ್ತದೆ

ಋತುಬಂಧದ ಅವಧಿಯಲ್ಲಿ ಮಹಿಳೆಯರನ್ನು ಕಾಡುವ ಸಮಸ್ಯೆಗಳನ್ನು ತಗ್ಗಿಸಲು ಸಾಸಿವೆ ಸಹಕಾರಿಯಾಗಿದೆ. ಋತುಬಂಧದ ಸಮಯದಲ್ಲಿ ಮೂಳೆಗಳಿಗೆ ಹಾನಿ ಸಾಮಾನ್ಯವಾಗಿದೆ ಮತ್ತು ಸಾಸಿವೆಯಲ್ಲಿ ಕ್ಯಾಲ್ಸಿಯಂ ಮತ್ತು ಮ್ಯಾಗ್ನೇಷಿಯಂ ಇರುವುದರಿಂದ ಈ ಹಾನಿಯನ್ನು ತಡೆಗಟ್ಟುತ್ತದೆ. ಇವೆರಡೂ ಮೂಳೆಗಳನ್ನು ಸದೃಢಗೊಳಿಸುತ್ತವೆ.

► ಜಠರಗರುಳಿನ ಕ್ಯಾನ್ಸರ್ ವಿರುದ್ಧ ರಕ್ಷಣೆ ನೀಡುತ್ತದೆ

ಸಾಸಿವೆಯಲ್ಲಿ ಗ್ಲುಕೊಸಿನೊಲೇಟ್‌ಗಳು ಮತ್ತು ಮೈಕ್ರೋಸೈನೇಸ್ ಕಿಣ್ವಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಮೈಕ್ರೋಸೈನೇಸ್ ಕಿಣ್ವಗಳು ಗ್ಲುಕೊಸಿನೊಲೇಟ್‌ಗಳನ್ನು ಐಸೊಥಾಯೊಸೈನೇಟ್‌ಗಳನ್ನಾಗಿ ವಿಭಜಿಸುತ್ತವೆ. ಐಸೊಥಾಯೊಸೈನೇಟ್‌ಗಳು ಜಠರಗರುಳಿನ ನಾಳದಲ್ಲಿ ಕರುಳಿನ ಕ್ಯಾನ್ಸರನ್ನು ತಡೆಯುತ್ತವೆ ಎನ್ನುವುದನ್ನು ಸಂಶೋಧನೆಗಳು ತೋರಿಸಿವೆ. ಅವು ಹಾಲಿ ಇರುವ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತವೆ ಮತ್ತು ಹೊಸ ಕೋಶಗಳು ವೃದ್ಧಿಯಾಗುವುದನ್ನು ತಡೆಯುತ್ತವೆ.

► ಬೆನ್ನುನೊವಿನಿಂದ ಶಮನ ನೀಡುತ್ತದೆ

ಬೆನ್ನುನೋವು ಅಥವಾ ಸ್ನಾಯುಸೆಳೆತದಿಂದ ಬಳಲುತ್ತಿದ್ದರೆ ಸಾಸಿವೆ ಕಾಳುಗಳನ್ನು ಅಗಿಯುವುದರಿಂದ ಶಮನ ದೊರೆಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News