ಚಳಿಗಾಲಕ್ಕೆ ಸಿದ್ಧತೆಗಳನ್ನು ನಡೆಸುತ್ತಿರುವ ಹಿಮಾಲಯದ ಬೌದ್ಧ ಸನ್ಯಾಸಿಗಳು

Update: 2018-08-07 10:38 GMT

ತ್ನಾಗ್ಯುಡ್ ಗೊಂಪಾ. ಇದು ಸಮುದ್ರಮಟ್ಟದಿಂದ ಸುಮಾರು 5,500 ಮೀ.(18,000 ಅಡಿ)ಗಳಷ್ಟು ಎತ್ತರದಲ್ಲಿ ಹಿಮಾಲಯದಲ್ಲಿರುವ ಬೌದ್ಧ ಮಠ. ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿನ ಕೊಮಿಕ್ ಗ್ರಾಮದ ಸಮೀಪವಿದೆ. ಏಷ್ಯಾದಲ್ಲಿ ಅತ್ಯಂತ ಎತ್ತರದಲ್ಲಿರುವ ಬೌದ್ಧ ಮಠಗಳಲ್ಲಿ ಒಂದಾಗಿರುವ ತ್ನಾಗ್ಯುಡ್ ಗೊಂಪಾ ನಿರ್ಮಾಣಗೊಂಡಿದ್ದು 14ನೇ ಶತಮಾನದಲ್ಲಿ ಎನ್ನಲಾಗಿದೆ. ಹಿಮಪಾತವು ಇಲ್ಲಿಯ ಬೌದ್ಧ ಸನ್ಯಾಸಿಗಳನ್ನು ಅಥವಾ ಲಾಮಾಗಳನ್ನು ವರ್ಷದಲ್ಲಿ ಏಳು ತಿಂಗಳ ಕಾಲ ಹೊರಜಗತ್ತಿನಿಂದ ಸಂಪೂರ್ಣವಾಗಿ ಪ್ರತ್ಯೇಕಿಸುತ್ತದೆ. ಈ ಸನ್ಯಾಸಿಗಳು ಮತ್ತು ಕೊಮಿಕ್ ಗ್ರಾಮಸ್ಥರು ಈಗ ಚಳಿಗಾಲಕ್ಕಾಗಿ ಭರದಿಂದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಆಹಾರ ಮತ್ತು ಇಂಧನಗಳ ಸಂಗ್ರಹ,ತರಕಾರಿಗಳನ್ನು ಒಣಗಿಸುವ ಕಾರ್ಯಗಳಲ್ಲಿ ಮತ್ತು ಪ್ರಾರ್ಥನೆಗಳಲ್ಲಿ ತೊಡಗಿಕೊಂಡಿದ್ದಾರೆ.

ಇಲ್ಲಿಯ ಖಾಯಂ ನಿವಾಸಿಗಳು ಕಟ್ಟುನಿಟ್ಟಾಗಿ ಬೌದ್ಧ ಧರ್ಮದ ಪ್ರಾರ್ಥನೆಗಳನ್ನು ಮಾಡುವುದರೊಂದಿಗೆ ತಮ್ಮ ದೈನಂದಿನ ಕೆಲಸಗಳು,ಚಳಿಗಾಲಕ್ಕಾಗಿ ಪೂರ್ವ ಸಿದ್ಧತೆಗಳು ಮತ್ತು ಪವಿತ್ರ ಗ್ರಂಥಗಳ ಅಧ್ಯನದಲ್ಲಿ ತೊಡಗಿಕೊಂಡಿರುವುದರಿಂದ ಇವು ಕೆಲವು ವ್ಯಸ್ತ ತಿಂಗಳುಗಳಾಗಿವೆ ಎನ್ನುತ್ತಾರೆ ತ್ನಾಗ್ಯುಡ್ ಗೊಂಪಾದ ಕಾರ್ಯದರ್ಶಿ ಪೆರ್ಮಾ ಸ್ಯಾಂಡ್ರಪ್

ಸಾಮಾನ್ಯವಾಗಿ ತ್ನಾಗ್ಯುಡ್ ಗೊಂಪಾದಲ್ಲಿ ಲಾಮಾಗಳು ಪ್ರತಿದಿನ ಎರಡು ಬಾರಿ ಪ್ರಾರ್ಥನೆಗಳನ್ನು ಮಾಡುತ್ತಾರೆ. ಇನ್ನು ಒಂದೂವರೆ ತಿಂಗಳಲ್ಲಿ ಬೇಸಿಗೆ ಮುಗಿದು ಚಳಿಗಾಲ ಆರಂಭಗೊಂಡಾಗ ಅವರು ಇಡೀ ದಿನ ಪ್ರಾರ್ಥನೆಗಳಲ್ಲಿ ತೊಡಗಿಕೊಂಡಿರುತ್ತಾರೆ.

ಇಲ್ಲಿ ಈಗ ಸುಮಾರು 20 ಲಾಮಾಗಳು ವಾಸವಾಗಿದ್ದಾರೆ. ಆದರೆ ಹಿಮಪಾತ ಆರಂಭಗೊಂಡಾಗ 10-12 ಲಾಮಾಗಳು ಮಾತ್ರ ಇಲ್ಲಿ ಕಾಣುತ್ತಾರೆ.

ಸುಮಾರು 50 ವರ್ಷಗಳ ಹಿಂದೆ ಟಿಬೆಟ್ ಚೀನಾದ ಆಡಳಿತಕ್ಕೊಳಪಟ್ಟ ನಂತರ ಹಲವಾರು ಲಾಮಾಗಳು ಮತ್ತು ಅವರ ಅನುಯಾಯಿಗಳು ಈ ಪ್ರದೇಶಕ್ಕೆ ವಲಸೆ ಬಂದಿದ್ದರು. ಕೊಮಿಕ್ ಗ್ರಾಮ ಸೇರಿದಂತೆ ಈ ಪ್ರದೇಶದಲ್ಲಿ ಬದುಕು ವಾತಾವರಣದ ತೀವ್ರ ಬದಲಾವಣೆಯನ್ನು ಅನುಭವಿಸುತ್ತಿರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಹಿಮಪಾತ ಯಾವಾಗ ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ಊಹಿಸಲು ಸಾಧ್ಯವಾಗುತ್ತಿಲ್ಲ. ಅದು ಯಾವಾಗ ಬೇಕಾದರೂ ಉಂಟಾಗಬಹುದು. ಹಿಮದ ಪ್ರಮಾಣದಲ್ಲಿ ಸ್ವಲ್ಪವೇ ಬದಲಾವಣೆಯಾದೂ ಅದು ದುರ್ಬಲ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಇಲ್ಲಿ ಹಲವಾರು ಪ್ರತಿಕೂಲ ಪರಿಣಾಮಗಳಿಗೆ,ವಿಶೇಷವಾಗಿ ನೀರಿನ ಕೊರತೆಗೆ ಕಾರಣವಾಗುತ್ತದೆ. ಕಳೆದ ವರ್ಷ ಈ ಪ್ರದೇಶದಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಮಪಾತವಾಗಿತ್ತು ಮತ್ತು ಇದು ಇಲ್ಲಿಯ ರೈತರು ಬೆಳೆಯುವ ನೆಲಗಡಲೆ ಮತ್ತು ಬಟಾಟೆ ಬೆಳೆಯ ಮೇಲೆ ಪರಿಣಾಮವನ್ನು ಬೀರಿತ್ತು ಎನ್ನುತ್ತಾರೆ ಸ್ಯಾಂಡ್ರಪ್.

ಹಿಮಪಾತ ಈ ಪ್ರದೇಶದಲ್ಲಿ ನೂರಾರು ವರ್ಷಗಳಿಂದಲೂ ಬದುಕುತ್ತಿರುವ ಜನರು ಮತ್ತು ಲಾಮಾಗಳ ಬದುಕಿನಲ್ಲಿ ಮುಖ್ಯಪಾತ್ರ ವಹಿಸುತ್ತಿದೆ. ಹೆಚ್ಚಿನ ಪ್ರವಾಸಿಗಳು ಬರಬೇಕು ಮತ್ತು ಉತ್ತಮ ಮೂಲಸೌಕರ್ಯಗಳು,ವಿಶೇಷವಾಗಿ ವೈದ್ಯಕೀಯ ಸೌಲಭ್ಯಗಳು ದೊರೆಯಬೇಕು ಎಂದು ಸ್ಥಳೀಯ ನಿವಾಸಿಗಳು ಬಯಸುತ್ತಿದ್ದಾರೆ. ಅಧಿಕಾರದಲ್ಲಿರುವವರು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ತಡೆಯಲು ಏನಾದರೂ ಮಾಡಿಯಾರು ಎಂಬ ಆಸೆಯನ್ನೂ ಈ ಜನರು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News